ಮಂಗಳೂರು, ಮಾ 24(SM): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಹೈಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಅಂತಿಮವಾಗಿ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಯುವ ನಾಯಕನಿಗೆ ಹೈಕಮಾಂಡ್ ಮಣೆ ಹಾಕಿದೆ. ಈ ಮೂಲಕ ಕಳೆದ 4 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹೊಸ ಮುಖವನ್ನು ಪರಿಚಯಿಸಿದೆ.
ಕಳೆದ 11 ಲೋಕಸಭಾ ಚುನಾವಣೆಗಳಲ್ಲಿ ಕೇವಲ ಇಬ್ಬರು ಮಾತ್ರ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸುಮಾರು 9 ಬಾರೀ ಈ ಕ್ಷೇತ್ರದಿಂದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿಯವರೇ ಸ್ಪರ್ಧಿಸಿದ್ದರು. ಈ ಪೈಕಿ ಕೇವಲ ನಾಲ್ಕೇ ನಾಲ್ಕು ಬಾರಿ ಮಾತ್ರ ಅವರಿಗೆ ಜಯ ಸಿಕ್ಕಿತ್ತು. ೫ ಸಲ ಬಿಜೆಪಿ ಎದುರು ತಲೆ ತಗ್ಗಿಸಿದ್ದರು.
ಇನ್ನು ಈ ನಡುವೆ 2 ಸಲ ಮಾಜಿ ಸಿಎಂ ವೀರಪ್ಪ ಮೋಯ್ಲಿಗೂ ಪಕ್ಷ ಮಣೆ ಹಾಕಿತ್ತು. ಆದರೆ ಗೆಲುವು ಅವರಿಂದಲೂ ಬಹು ದೂರವಾಗಿತ್ತು. ಎರಡು ಬಾರಿಯೂ ವೀರಪ್ಪ ಮೊಯ್ಲಿ ಈ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ಇನ್ನು ಇವರ ನಡುವೆ ಹಲವು ಮಂದಿ ಈ ಕ್ಷೇತ್ರಗಳಿಗೆ ಆಕಾಂಕ್ಷಿಗಳಾಗಿದ್ದರು. ಆದರೂ ಈ ಇಬ್ಬರು ನಾಯಕರಿಗೆ ಮಾತ್ರವೇ ಹೈಕಮಾಡ್ ಮಣೆ ಹಾಕಿರೋದು ಗಮನಾರ್ಹ ಸಂಗತಿ.
ಇನ್ನು ಈ ಸಲದ ಲೋಕ ಸಮರದಲ್ಲಿ ಸ್ಪರ್ಧಿಸಲು ಜನಾರ್ಧನಾ ಪೂಜಾರಿ ಮತ್ತೆ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಹೈಕಮಾಂಡ್ ಅವರಿಗೆ ಮಣೆ ಹಾಕಿಲ್ಲ. ಬದಲಾಗಿ ಹೊಸ ಮುಖಗಳಿಗೆ ಇಲ್ಲಿ ಟಿಕೆಟ್ ನೀಡಲು ನಿರ್ಧರಿಸಿದೆ.
ಈ ಬಾರಿಯ ರೇಸ್ ನಲ್ಲಿ ಪ್ರಮುಖವಾಗಿ ಮೂವರ ಹೆಸರುಗಳು ಕೇಳಿ ಬಂದಿದ್ದವು. ಮಾಜಿ ಸಚಿವ ರಮಾನಾಥ ರೈ, ಹಿರಿಯ ಮುಖಂಡ ಹರಿಪ್ರಸಾದ್ ಹಾಗೂ ಮಿಥುನ್ ರೈ. ಈ ಮೂವರಲ್ಲದೆ ಮತ್ತೆ ಕೆಲವು ನಾಯಕರು ಕೂಡ ಕ್ಷೇತ್ರಕ್ಕೆ ಆಕಾಂಕ್ಷಿಗಳಾಗಿದ್ದರು. ಆದರೆ, ಅಂತಿಮವಾಗಿ ಹೈಕಮಾಂಡ್ ಗೆ ಆಯ್ಕೆ ಇದ್ದದ್ದು ಈ ಮೂರು ನಾಯಕರಲ್ಲೊಬ್ಬರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡುವುದು. ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಲುವಾಗಿ ಮಂಗಳೂರು, ಬೆಂಗಳೂರು ಮಾತ್ರವಲ್ಲದೆ ದೆಹಲಿಯಲ್ಲಿ ಕೂಡ ಸಭೆ ನಡೆಸಲಾಗಿತ್ತು.
ಚರ್ಚೆ ಮಾತುಕತೆಯ ಬಳಿಕ ಇದೀಗ ಯುವನಾಯಕ ಮಿಥುನ್ ರೈಗೆ ಹೈಕಮಾಂಡ್ ಮಣೆ ಹಾಕಿದ್ದು, ಈ ಮೂಲಕ ನಾಲ್ಕು ದಶಕಗಳ ಬಳಿಕ ದ.ಕ. ಲೋಕಸಭಾ ಕ್ಷೇತ್ರಕ್ಕೆ ಹೋಸ ಮುಖವೊಂದನ್ನು ಕಾಂಗ್ರೆಸ್ ಪರಿಚಯಿಸಿದೆ.