ಮಂಗಳೂರು, ಎ17 (DaiiworldNews/HR): ಮನೆ ಕಳ್ಳತನ ನಡೆಸುತ್ತಿದ್ದ ಮತ್ತು ಕೊಲೆ ಪ್ರಕರಣದ ಕುಖ್ಯಾತ ಅಂತರ್ ಜಿಲ್ಲಾ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೈಸೂರಿನ ಹೂಟಗಳ್ಳಿಯ ನಿವಾಸಿ ಸಿದ್ದರಾಜು ಅಲಿಯಾಸ್ ರೌಡಿ (52) ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಆರೋಪಿಯ ವಿರುದ್ಧ ಕಾವೂರು, ಮಣಿಪಾಲ, ಕಾರ್ಕಳ, ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ ಮತ್ತು ಚಿಕ್ಕಮಗಳೂರು ಠಾಣೆಗಳಲ್ಲಿ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 15,00,000 ಮೌಲ್ಯದ 270 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ ಮತ್ತು ಎರಡು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಸಿದ್ದರಾಜು ತನ್ನ ಸಹಾಯಕ ಹಾಸನ ಮೂಲದ ಪುನೀತ್ ಎಂಬಾತನ ಸಹಾಯದಿಂದ ಕೃತ್ಯ ಎಸಗುತ್ತಿರುವುದಾಗಿ ತಿಳಿಸಿದ್ದಾನೆ ಎಂದರು.
ಇನ್ನುಈತ ಮೈಸೂರು ನಗರ ವಿಜಯ ನಗರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ 2005 ನೇ ಇಸವಿಯಲ್ಲಿ ಗಂಗಮ್ಮ ಎಂಬ ಮಹಿಳೆಯ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈತನು ಮೈಸೂರಿನ ಮಂಟೆಲಿಂಗಯ್ಯ ಮತ್ತು ಇತರ ಆರೋಪಿಗಳೊಂದಿಗೆ ಸೇರಿಕೊಂಡು ಗಂಗಮ್ಮನವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಕಮ ನದಿಗೆ ಬಿಸಾಡಿದ್ದ. ಈ ಪ್ರಕರಣ ದಾಖಲಾದ ಸಮಯ ಆತನ ಹೆಸರು ರೌಡಿ ಸಿದ್ದ ಎಂಬುದಾಗಿತ್ತು. ಪ್ರಕರಣದಲ್ಲಿ ದಸ್ತಗಿರಿ ಆಗಿ ನ್ಯಾಯಾಂಗ ಬಂಧನದಲ್ಲಿದ್ದ ಸಮಯ 2006 ನೇ ಇಸವಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿ, ಈವರೆಗೆ ಪತ್ತೆಯಾಗದೇ ತಲೆಮರೆಸಿಕೊಂಡಿದ್ದನು.
ಈ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರು 10 ಸಾವಿರ ರೂ.ನಗದು ಬಹುಮಾನ ಪ್ರಕಟಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಮತ್ತು ಎಸಿಪಿ ಪಿ.ಎ.ಹೆಗಡೆ ಉಪಸ್ಥಿತರಿದ್ದರು.