ಉಡುಪಿ, ಏ 17 (DaijiworldNews/MS): "ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಉಡುಪಿಗೆ ಬಂದಿರುವ ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಅಪಾರ ಪ್ರಮಾಣದ ಹಣದ ಗಂಟನ್ನು ತರಲಾಗಿದೆ"ಎಂದು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ರಾಜ್ ಕಾಂಚನ್ ಅವರ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾತನಾಡಿದ ವಿನಯ್ ಕುಮಾರ್ ಸೊರಕೆ,"ನನಗೆ ಸಿಕ್ಕಿರುವ ಮಾಹಿತಿಯಂತೆ ಇಂದು ಅಣ್ಣಾಮಲೈ ಅವರ ಹೆಲಿಕಾಪ್ಟರ್ ಮೂಲಕ ನಮ್ಮ ಜಿಲ್ಲೆಗೆ ಹಣದ ಗಂಟು ರವಾನೆಯಾಗಿದೆ. ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆಯೇ ಪಟಾಕಿ ಸಿಡಿಸಿರುವ ಇವರು ಒಂದು ವೇಳೆ ಗೆದ್ದರೆ ಬಾಂಬ್ ಸ್ಫೋಟಿಸಬಹುದು. ಚುನಾವಣೆ ಘೋಷಣೆಗೂ ಮುನ್ನವೇ ನಾವು ನಾಲ್ಕು ಗ್ಯಾರಂಟಿಗಳನ್ನು ಘೋಷಿಸಿದ್ದೇವೆ. ಸುಳ್ಳು ಆರೋಪಗಳಿಂದ ಕಳೆದ ನಾವು ಸೋತಿದ್ದೇವೆ" ಎಂದು ಸೊರಕೆ ಹೇಳಿದ್ದಾರೆ.
"ನಾವೂ ಹಿಂದೂಗಳೇ ಹೊರತು ಮೂಲಭೂತವಾದಿಗಳಲ್ಲ. ನಾವು ಪ್ರತಿದಿನವೂ ಪೂಜೆ ಮಾಡುತ್ತೇವೆ. ಕ್ರಿಸ್ತನಿಗೂ ಕೃಷ್ಣನಿಗೂ ಸಾಮ್ಯತೆಗಳಿವೆ. 2014ರಲ್ಲಿ ನಾವು ಮೋದಿಯವರ ಕೈಗೆ ಭಾರತವನ್ನು ಕೊಟ್ಟಾಗ ಭಾರತ ಅಂತರಾಷ್ಟ್ರೀಯ ಬ್ರ್ಯಾಂಡ್ ಆಗಿತ್ತು. ಮೋದಿ ವಿರುದ್ಧ ಸಿಡಿದೆದ್ದ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ಏಕೆಂದರೆ ಅವರು ನ್ಯಾಯಯುತ ಮತ್ತು ಜನಸ್ನೇಹಿ ಆಡಳಿತ ನೀಡಿದ್ದಾರೆ. ಅವರ ಆಡಳಿತ ಈ ರಾಜ್ಯಕ್ಕೆ ವರದಾನವಾಗಿದೆ. ಪ್ರಮೋದ್ ಮಧ್ವರಾಜ್ ಸೋತಿರುವುದು ಸ್ವಯಂ ತಪ್ಪಿನಿಂದಲೇ ಹೊರತು ಕಾಂಗ್ರೆಸ್ ಕಾರ್ಯಕರ್ತರ ತಪ್ಪಿನಿಂದಲ್ಲ. ನಮ್ಮ ಅಭ್ಯರ್ಥಿ ಪ್ರಸಾದರಾಜ್ ಕಾಂಚನ್ ಅವರು ಬಹಳ ಹಿಂದಿನಿಂದಲೂ ಹೆಚ್ಚಿನ ಉದಾರತೆಯಿಂದ ಕೆಲಸ ಮಾಡಿದವರು. ಅವರಿಗೆ ಉಡುಪಿಯ ನಾಡಿಮಿಡಿತದ ಅರಿವಿದೆ" ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಲಾಯಿತು.ಬಳಿಕ ಉಡುಪಿ ತಾಲೂಕು ಕಚೇರಿಯಲ್ಲಿ ಪ್ರಸಾದ್ರಾಜ್ ಕಾಂಚನ್ ನಾಮಪತ್ರ ಸಲ್ಲಿಸಿದರು.