ಮಂಗಳೂರು,ಮಾ24(AZM):ಅತೀ ಹೆಚ್ಚು ಜನ ಸಂಚಾರವಿರುವ ರಸ್ತೆ ಇದು, ಶಾಲಾ ಮಕ್ಕಳು, ಮಹಿಳೆಯರು, ಸಾರ್ವಜನಿಕರು ಸೇರಿದಂತೆ ಆಸ್ಪತ್ರೆಗೆ ಬರುವ ರೋಗಿಗಳು,ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಈ ರಸ್ತೆಯ ಬದಿಯಲ್ಲೇ ಇರುವ ಬಸ್ ತಂಗುದಾಣದ ಮೇಲ್ಛಾವಣಿ ಇಂದು ಬೀಳುತ್ತೋ, ನಾಳೆ ಬೀಳುತ್ತೋ ಎನ್ನುವ ಸ್ಥಿತಿಯಲ್ಲಿದೆ.
ಫಳ್ನೀರಿನ ಮದರ್ ತೆರೆಸಾ ರಸ್ತೆಯ ಬದಿಯಲ್ಲಿ ಇರುವ ಬಸ್ ತಂಗುದಾಣದ ದುರವಸ್ಥೆ ಇದು. ಯಾವಾಗ ಇದರ ಮೇಲ್ಛಾವಣಿ ಕುಸಿದು, ರಸ್ತೆಯಲ್ಲಿ ಓಡಾಡುವವರ ಮೇಲೆ ಬೀಳುತ್ತೋ ಗೊತ್ತಿಲ್ಲ. ದಿನ ನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು ಓಡಾಡುತ್ತಿರುತ್ತಾರೆ. ಸಮೀಪದಲ್ಲೇ ಆಸ್ಪತ್ರೆ, ಶಾಲಾ ಕಾಲೇಜುಗಳು ಇದ್ದು, ಆಸ್ಪತ್ರೆಗೆ ಬರುವ ರೋಗಿಗಳು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಓಡಾಡುತ್ತಿರುತ್ತಾರೆ. ಬಸ್ ತಂಗುದಾಣದಲ್ಲಿ ಕೂಡಾ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಇದ್ದಾರೆ. ಈ ಹಿನ್ನಲೆ ನಗರದ ಮಧ್ಯ ಭಾಗದಲ್ಲೇ ಇರುವ ಈ ಬಸ್ ತಂಗುದಾಣ ತುಂಬಾ ಅಪಾಯಕಾರಿಯಾಗಿ ನಿಂತಿದೆ ಎಂದು ಸ್ಥಳೀಯರಾದ ವೇದಾವತಿಯವರು ಆರೋಪಿಸಿದ್ದಾರೆ.
ಈ ಬಸ್ ತಂಗುದಾಣ ಕುಸಿದು ಬಿದ್ದು ಭೀಕರ ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ, ದುರಸ್ಥಿ ಕಾರ್ಯ ನಡೆಸಬೇಕಾಗಿದೆ.