ಬೆಳ್ತಂಗಡಿ, ಏ 16 (DaijiworldNews/HR): ಜಗದೀಶ್ ಶೆಟ್ಟರ್ ಅಂತಹ ದೊಡ್ಡ ನಾಯಕರು ಅವಶ್ಯಕತೆ ಇಲ್ಲ. ಸಣ್ಣವರು ಯಾರಾದರೂ ಬಂದರೆ ತೆಗೆದುಕೊಳ್ಳುತ್ತೇವೆ. ಯಾಕೆಂದರೆ ನಮ್ಮದು ಸಣ್ಣ ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಾಗ ಶೆಟ್ಟರ್ ಅವರು ನಿಮ್ಮನ್ನು ಸಂಪರ್ಕ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲ ನನ್ನನ್ನು ಯಾವುದೇ ಸಂಪರ್ಕ ಮಾಡಿಲ್ಲ, ಅಂತಹ ದೊಡ್ಡ ನಾಯಕರು ಅವಶ್ಯಕತೆ ಇಲ್ಲ. ಸಣ್ಣವರು ಯಾರಾದರೂ ಬಂದರೆ ತೆಗೆದುಕೊಳ್ಳುತ್ತೇವೆ. ಯಾಕೆಂದರೆ ನಮ್ಮದು ಸಣ್ಣ ಪಕ್ಷ. ಅಂತ ದೊಡ್ಡ ನಾಯಕರನ್ನು ನಾವು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ, ಅಂತಹ ದೊಡ್ಡ ನಾಯಕರ ಬಗ್ಗೆ ಯಾವುದೇ ನಿರೀಕ್ಷೆಯಿಲ್ಲ ಎಂದರು.
ಇನ್ನು ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರ ಅವರ ಪಕ್ಷದ ಆಂತರಿಕ ಬೆಳವಣಿಗೆ. ಅವರು ಅನುಭವಸ್ಥ ರಾಜಕಾರಣಿ. ನಾನು ಹಿಂದೆ ಬಿಜೆಪಿಯಲ್ಲಿ ನಡೆಯುತ್ತಿರುವ ಡಿಎನ್ ಎ ಬಗ್ಗೆ ಮಾತನಾಡಿದ್ದೆ. ಅವರಂತವರೇ ಇಂತಹ ತೀರ್ಮಾನ ಮಾಡಿದ್ದಾರೆಂದರೆ ಆ ಡಿಎನ್ಎ ಇವತ್ತು ಅಲ್ಲಿಯ ಚಟುವಟಿಕೆಗೆ ಪೂರಕವಾಗಿದೆ ಎಂದಿದ್ದಾರೆ.