ಮಂಗಳೂರು, ಏ 15 (DaijiworldNews/MS): ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ 2023ರ ಮೇ. 10ರಂದು ನಡೆಯಲಿರುವ ಚುನಾವಣೆಗೆ ಎರಡನೇ ದಿನವಾದ ಏ.15ರ ಶನಿವಾರ ಮಂಗಳೂರು ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮೂವರು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದ್ದಾರೆ.
204- ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಕೃಷ್ಣ ಪೂಜಾರಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ 2 ನಾಮಪತ್ರಗಳನ್ನು ಹಾಗೂ 205 - ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ರಾಜೇಶ್ ನಾಯ್ಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಉಳಿದಂತೆ 200 -ಬೆಳ್ತಂಗಡಿ, 201-ಮೂಡಬಿದ್ರೆ, 202- ಮಂಗಳೂರು ಉತ್ತರ, 203-ಮಂಗಳೂರು ದಕ್ಷಿಣ, 206 ಪುತ್ತೂರು ಹಾಗೂ 207- ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಇದುವರೆಗೆ ಒಟ್ಟಾರೆ 5 ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದೆ.