ಮಂಗಳೂರು, ಏ 15 (DaijiworldNews/MS): 224 ಕರ್ನಾಟಕ ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಈ ಮೂಲಕ 58 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿತ್ತು. ಇದೀಗ ಇಂದು 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಆದರೆ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಇನ್ನು ಹೆಸರು ಘೋಷಣೆಯಾಗಿಲ್ಲ. ಬಿಜೆಪಿಯಿಂದ ಇಲ್ಲಿ ಹಾಲಿ ಶಾಸಕ ಡಾ. ಬೈ ಭರತ್ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ.
ಇವರಲ್ಲದೇ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದಿಂದ ಯಶೋದಾ ಅವರು ಹಾಗೂ ಜೆಡಿಯು ಪಕ್ಷದಿಂದ ಸುಪ್ರೀತ್ ಕುಮಾರ್ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಮಾತ್ರ ಇನ್ನು 3ನೇ ಪಟ್ಟಿಯಲ್ಲೂ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ.
ಮಂಗಳೂರು ಉತ್ತರ ಕ್ಷೇತ್ರಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ ಮತ್ತು ಉದ್ಯಮಿ ಇನಾಯತ್ ಆಲಿ ನಡುವೆ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ಇದೆ. ಮೊಯ್ದಿನ್ ಬಾವ ಮಾಜಿ ಸಿಎಂ ಸಿದ್ದರಾಮಯ್ಯ ಬಣದೊಂದಿಗೆ ಗುರುತಿಸಿಕೊಂಡರೆ, ಇನಾಯತ್ ಆಲಿ ಅವರು ಡಿ ಕೆ ಶಿವಕುಮಾರ್ ಅವರ ಆಪ್ತರಾಗಿದ್ದಾರೆ. ಹೀಗಾಗಿ ಟಿಕೆಟ್ ಗಾಗಿ ಇಬ್ಬರೂ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಅಂತಿಮವಾಗಿ ಟಿಕೆಟ್ ಯಾರಿಗೆ ಘೋಷಣೆಯಾಗಲಿದೆ ಎನ್ನುವುದು ಕೂತೂಹಲವಾಗಿದೆ.
ಮಂಗಳೂರು ದಕ್ಷಿಣಕ್ಕೆ ಕ್ಷೇತ್ರಕ್ಕೆ ಜೆ ಆರ್ ಲೋಬೋ ಮತ್ತು ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಈ ಕ್ಷೇತ್ರದ ಟಿಕೆಟ್ಗಾಗಿ ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಸದಸ್ಯ ಶಶಿಧರ್ ಹೆಗ್ಡೆ, ಕುದ್ರೋಳಿ ದೇವಸ್ಥಾನದ ಖಜಾಂಚಿ ಪದ್ಮರಾಜ್ ಪ್ರಬಲ ಪೈಪೋಟಿ ನೀಡಿದ್ದರು. ಇವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ಹಾಲಿ ಶಾಸಕ ವೇದವ್ಯಾಸ ಕಾಮತ್ ಸ್ಪರ್ಧಿಸಲಿದ್ದಾರೆ.
ಇನ್ನು ಪುತ್ತೂರು ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಹೊಸಮುಖ ಪರಿಚಯಿಸಿದೆ. ಉದ್ಯಮಿ ಅಶೋಕ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟಿಸಿದೆ.