ಬೈಂದೂರು, ಏ 14 (DaijiworldNews/MS): ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನನಗೆ ಅವಕಾಶ ನೀಡಿದೆ ಎಂದರೆ ಅದು ಪ್ರತಿಯೊಬ್ಬ ಕಾರ್ಯಕರ್ತನಿಗೆ ಅವಕಾಶ ನೀಡುತ್ತದೆ ಎಂದೇ ಅರ್ಥ. ಹಾಗಾಗಿ ಸಾಮಾನ್ಯ ಕಾರ್ಯಕರ್ತರ ಪಕ್ಷ ಬಿಜೆಪಿ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸೀಟು ಪಡೆದ ಬಳಿಕ ಬೈಂದೂರು ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಮೊದಲ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ನನ್ನ ಬಾಲ್ಯದಿಂದಲೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಂತೆ ಬೆಳೆದವನು. ಅಧಿಕಾರದ ಆಸೆಯಿಲ್ಲ. ನಾನು ಗೆದ್ದರೆ ಬಿಜೆಪಿ ಗೆದ್ದಂತೆ. ಬಿಜೆಪಿ ಗೆದ್ದರೆ ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ಗೆದ್ದಂತೆ. ಯಾವತ್ತೂ ನಾನು ಪಕ್ಷ ಸಂಘಟನೆಗೆ ಒತ್ತು ಕೊಟ್ಟಿದ್ದೇನೆಯೇ ಹೊರತು ಅಧಿಕಾರದ ಲಾಲಸೆಗಾಗಿ ಅಲ್ಲ ಎಂದರು. ನನಗೆ ಈ ಅವಧಿಗೆ ಅವಕಾಶ ನೀಡಿದೆ. ಮುಂದಿನ ಸರದಿ ಇನ್ಯಾರದ್ದೋ ಆಗಿರಬಹುದು. ಅದನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಅವಧಿಯಲ್ಲಿ ಬೈಂದೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಅಭ್ಯರ್ಥಿ ಆಯ್ಕೆಯಲ್ಲಿ ತಡವಾಗಿದೆ ಎನ್ನುವುದು ಸುಳ್ಳು. ಯಾಕೆಂದ್ರೆ ನಮ್ಮ ಪಕ್ಷದಲ್ಲಿ ಅಭ್ಯರ್ಥಿ ಯಾರು ಎನ್ನುವುದು ಮುಖ್ಯವೇ ಅಲ್ಲ. ಕಾರ್ಯಕರ್ತರು ಸೈನಿಕರಂತೆ ಸಿದ್ಧರಾಗಿದ್ದಾರೆ. ಕಮಾಂಡಿಗಾಗಿ ಕಾಯುತ್ತಾರೆ ಅಷ್ಟೆ. ಹಾಗಾಗಿ ಚುನಾವಣೆಯನ್ನು ಗೆಲ್ಲುವುದು ಪಕ್ಷದ ಕಾರ್ಯಕರ್ತರೇ ಹೊರತು ನಾಯಕರಲ್ಲ ಎಂದರು.
ಕೈಗಾರಿಕಾ ಪ್ರಕೋಷ್ಟ ಜಿಲ್ಲಾ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಿಯದರ್ಶಿನಿ ಬಿಜೂರು, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಯುವ ಮೋರ್ಚಾ ಮುಖಂಡ ಶರತ್ ಶೆಟ್ಟಿ ಉಪ್ಪುಂದ, ಉದ್ಯಮಿ ಅಶೀಕ್ ಕುಮಾರ್ ಶೆಟ್ಟಿ, ಉಸ್ತುವಾರಿ ಬಿ. ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.