ಸುಳ್ಯ, ಏ 14 (DaijiworldNews/MS): ರಾಜಕೀಯ ನಿವೃತ್ತಿ ಹೇಳಿಕೆ ಟಿಕೆಟ್ ಸಿಗದ ಕಾರಣ ತತ್ ಕ್ಷಣದ ನೋವಾಗಿತ್ತು. ಆದರೆ ಇದೀಗ ನನ್ನ ಹೇಳಿಕೆ ಹಿಂಪಡೆಯುತ್ತಿದ್ದು, ಸಕ್ರೀಯ ರಾಜಕೀಯದಲ್ಲಿದ್ದುಕೊಂಡ ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಕೊಂಡು ಪೂರಕ ಕೆಲಸ ಮಾಡುತ್ತೇನೆ ಎಂದು ಸಚಿವ ಎಸ್.ಅಂಗಾರ ತಿಳಿಸಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ, ಆದರೆ ನನಗೆ ಹೇಳದೆ ಆಯ್ಕೆ ಮಾಡಿರುವುದು ನೋವುಂಟಾಗಿತ್ತು. ಇದು ತತ್ ಕ್ಷಣದ ನೋವಷ್ಟೇ..ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆಯುತ್ತೇನೆ. 7 ಬಾರಿ ಸ್ಪರ್ಧೆ ಮಾಡಿದಾಗಲೂ ನಾನೆಂದೂ ಟಿಕೆಟ್ ಗಾಗಿ ಲಾಬಿ ಮಾಡಿದವನಲ್ಲ ಪಕ್ಷವೇ ಅವಕಾಶ ನೀಡಿತ್ತು.
ಏಪ್ರಿಲ್ 11ರ ರಾತ್ರಿ ಟಿ.ವಿ. ನೋಡಿದಾಗಲೇ ನನಗೆ ಅವಕಾಶವಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಇದರಿಂದ ನನ್ನ ಮನಸ್ಸಿಗೆ ತೀವ್ರ ಆಘಾತವಾಯಿತು. ಯಾರಲ್ಲಿ ಏನು ಹೇಳಬೇಕೆಂದೂ ಹೊಳೆಯಲಿಲ್ಲ. ಹೀಗಾಗಿ 12 ರಂದು ಬೆಳಗ್ಗೆ ನಾನು ಗೊಂದಲದಿಂದ ನನ್ನ ನಿರ್ಧಾರವನ್ನು ಪ್ರಕಟ ಮಾಡಿದೆ .ಬಳಿಕ ನನ್ನ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಆರಂಭವಾಗಿರುವುದು ಗಮನಿಸಿದ್ದೇನೆ. ಇದರಿಂದಾಗಿ ನನ್ನ ಕ್ಷೇತ್ರದ ಮತದಾರರಿಗೆ , ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ತಪ್ಪು ಸಂದೇಶ ಹೋಗುತ್ತಿರುವುದು ಸರಿಯಲ್ಲ. ನಿಜ ಸಂಗತಿ ತಿಳಿಸುವುದು ಅಗತ್ಯ ಅನ್ನಿಸಿದ್ದರಿಂದ ನಾನು ಈ ಹೇಳಿಕೆ ನೀಡುತ್ತಿದ್ದೇನೆ ಎಂದರು. ರಾಜಕೀಯದಲ್ಲಿ ಇಲ್ಲದಿದ್ದರೂ ಸಮಾಜದ ಮಧ್ಯೆ ನನ್ನ ಕೆಲಸ, ಕರ್ತವ್ಯ ನಿಲ್ಲುವುದಿಲ್ಲ.
ಪಕ್ಷ ಘೋಷಣೆ ಮಾಡಿದ ಅಭ್ಯರ್ಥಿ ಪರ ನಾನು ನಿಲ್ಲುತ್ತೇನೆ. ಪಕ್ಷದಲ್ಲಿ ಸಕ್ರಿಯನಾಗಿದ್ದು, ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.