ಸುಳ್ಯ, ಏ 14 (DaijiworldNews/MS): ಕಳ್ಳನೋರ್ವ ಒಂದು ಸ್ಕೂಟಿ ಕದ್ದುಕೊಂಡು ಬಂದು ಹೋಟೆಲ್ ಒಂದರ ಶೌಚಾಲಯದಲ್ಲಿ ನಿದ್ದೆ ಮಾಡಿ ಕೊನೆಗೆ ಪೊಲೀಸ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಉಡುಪಿಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದರಿಂದ ಸ್ಕೂಟಿ ಕದ್ದಿದ್ದ. ಅದನ್ನು ಮಂಡ್ಯದತ್ತ ತೆಗೆದುಕೊಂಡು ಹೋಗುವ ದಾರಿಯಲ್ಲಿ ಸುಳ್ಯ ಸಮೀಪದ ಗೂನಡ್ಕದ ದೊಡ್ಡಡ್ಕದಲ್ಲಿರುವ ತಾಜುದ್ದೀನ್ ಟರ್ಲಿ ಎಂಬುವವರ ಇಂಡಿಯನ್ ಗೇಟ್ ಹೋಟೆಲ್ ನಲ್ಲಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದಾನೆ.
ಟೀ ಕುಡಿದ ಬಳಿಕ ಈತ ಶೌಚಾಲಯಕ್ಕೆ ಎಂದು ಹೋದವನು ಸುಮಾರು ಅರ್ಧ ಗಂಟೆ ಕಳೆದರೂ ಬಂದಿರಲಿಲ್ಲ. ಆಗ ಹೋಟೆಲ್ನಲ್ಲಿ ಇದ್ದವರು ಶೌಚಾಲಯದ ಬಾಗಿಲನ್ನು ಬಡಿದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಶಬ್ದ ಬರಲಿಲ್ಲ. ಗಾಬರಿಗೊಂಡು ಹೋಟೇಲ್ ಸಿಬ್ಬಂದಿ ಶೌಚಾಲಯದ ಬಾಗಿಲಿನ ಮೇಲ್ಭಾಗದ ರಂಧ್ರದಿಂದ ಇಣುಕಿ ನೋಡಿದಾಗ ಆತ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಮತ್ತಷ್ಟು ಆತಂಕಕ್ಕೆ ಒಳಗಾಗಿ ಹೋಟೆಲ್ನವರು ಆತನ ಮೇಲೆ ನೀರು ಚಿಮುಕಿಸಿದ್ದಾರೆ. ಈ ವೇಳೆ ನಿದ್ದೆಯಿಂದ ಎದ್ದ ಆತ ಶೌಚಾಲಯದ ಬಾಗಿಲು ತೆಗೆದು ಹೊರಬಂದಿದ್ದಾನೆ.
ಈ ವೇಳೆ ಹೋಟೆಲ್ನವರು ಆತನ ಬಳಿ ವಿಚಾರಿಸಿದಾಗ ಸಂಶಯಾಸ್ಪದವಾಗಿ ಮಾತನಾಡಿದ್ದು ಬಳಿಕ ಅಲ್ಲಿಂದ ಸ್ಕೂಟಿಯಲ್ಲಿ ಮಡಿಕೇರಿ ಕಡೆ ತೆರಳಲು ಪ್ರಯತ್ನ ಮಾಡಿದ್ದಾನೆ. ಈತನ ಬಗ್ಗೆ ಸಂಶಯಗೊಂಡ ಹೋಟೆಲ್ನವರು ಕಲ್ಲುಗುಂಡಿ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಕಲ್ಲುಗುಂಡಿಯಲ್ಲಿ ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದಾಗ ಈತ ಮಾಡಿದ ಕಳ್ಳತನ ಬೆಳಕಿಗೆ ಬಂದಿದೆ.
ಬಳಿಕ ಆತನನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕೋಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅಲ್ಲಿನ ಪೋಲಿಸರು ಸ್ಕೂಟಿ ವಾಹನವೊಂದು ಕಳ್ಳತನವಾಗಿರುವ ದೂರು ದಾಖಲಾಗಿರುವ ಮಾಹಿತಿ ನೀಡಿದ್ದಾರೆ. ಬಳಿಕ ಕೋಟಾ ಪೊಲೀಸರು ಸುಳ್ಯಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.