ಮಂಗಳೂರು, ಏ 14 (DaijiworldNews/MS):ಮುಂಬರುವ ಮೇ. 10ರಂದು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬವಿದೆ. ಕಾರಣ ಪ್ರತಿಯೊಬ್ಬ ಅರ್ಹ ಮತದಾರ ಅಂದು ಮನೆಯಿಂದ ಹೊರ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು, ನಿರ್ಭೀತಿ ನಿಷ್ಪಕ್ಷಪಾತವಾಗಿ ಈ ಕಾರ್ಯ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಕರೆ ನೀಡಿದರು.
ಸ್ವೀಪ್ ಕಾರ್ಯ ಚಟುವಟಿಕೆ ಅಂಗವಾಗಿ ಅವರು ಏ. 13ರ ಗುರುವಾರ ನಗರದ ಕ್ಯಾಪಿನೋ ಅಪಾರ್ಟ್ಮೆಂಟ್ ನಲ್ಲಿ ಅಪಾರ್ಟ್ಮೆಂಟ್ ಕ್ಯಾಂಪೇನ್ ಗೆ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಹಬ್ಬದಂತೆ, ಈ ಹಬ್ಬದಲ್ಲಿ ಭಾರತೀಯ ನಾಗರೀಕರೆಲ್ಲರೂ ಹೆಮ್ಮೆಯಿಂದ ಪಾಲ್ಗೊಳ್ಳಬೇಕು, ಈ ಭಾಗವಹಿಸುವಿಕೆಯಲ್ಲಿ ಗ್ರಾಮೀಣ ಪ್ರದೇಶದ ಮತದಾರ ತೋರುವ ಆಸಕ್ತಿಗಿಂತ ನಗರ ಪ್ರದೇಶದ ಮತದಾರರ ಆಸಕ್ತಿ ಅತಿ ಕಡಿಮೆ, ಕಾರಣ ಅಪಾರ್ಟ್ಮೆಂಟ್ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ, ಇದೇ ಮೊದಲ ಬಾರಿಗೆ ಈ ರೀತಿಯ ಆಂದೋಲವನ್ನು ಹಮ್ಮಿಕೊಳ್ಳಲಾಗಿದ್ದು ಅಪಾರ್ಟ್ಮೆಂಟ್ನ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಒಳಗೊಂಡಂತೆ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಅಪಾರ್ಟ್ಮೆಂಟ್ ಗೆ ಭೇಟಿ ನೀಡಿ ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಡಲಿದೆ, ಅದಕ್ಕೆ ಯಕ್ಷಗಾನದ ಟಚ್ ನೀಡಲಾಗಿದೆ, ಸಿಗ್ನೇಚರ್ ಕ್ಯಾಂಪೇನ್ ಕೂಡ ಹಮ್ಮಿಕೊಳ್ಳಲಾಗಿದೆ, ಈ ಕ್ಯಾಂಪೆನ್ ನಲ್ಲಿ ಸಹಿ ಮಾಡಿದವರು ಮಾನಸಿಕವಾಗಿ ಮತದಾನ ಮಾಡುವ ಸ್ಥಿತಿಗೆ ತಲುಪಿರುವ ಸಾಧ್ಯತೆಗಳಿರುತ್ತದೆ, ಅದೇ ರೀತಿ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡು ಆ ಮೂಲಕವೂ ಮತದಾನ ಜಾಗೃತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
40 ರಿಂದ 50 ಪ್ರತಿಶತ ಜನರು ಮಂಗಳೂರಿನ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುತ್ತಿದ್ದು, ಇನ್ಸ್ಟಿಟ್ಯೂಟ್ ಫಾರ್ ಎಕನಾಮಿ ಅಂಡ್ ಸೋಶಿಯಲ್ ಚೇಂಗ್ ಎಂಬ ಸಂಶೋಧನಾ ಸಂಸ್ಥೆಯ ವರದಿಯಂತೆ ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವವರು ಮತದಾನದಿಂದ ಹಿಂದುಳಿದಿರುತ್ತಾರೆ, ಅವರಲ್ಲಿ ಹೆಚ್ಚಿನ ಆಸಕ್ತಿ ಇರದು ಎಂಬ ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ಯಾಪಿನೋ ಅಪಾರ್ಟ್ಮೆಂಟ್ ಸಂಘದ ಅಧ್ಯಕ್ಷ ರಾಮ್ ಪ್ರಸಾದ್, ಕಾರ್ಯದರ್ಶಿ ಉಮೇಶ್ ರಾವ್, ನೋಡಲ್ ಅಧಿಕಾರಿ ರಾಜಶೇಖರ್, ಇ ಎಲ್ ಸಿ ಅಧಿಕಾರಿ ಪುಷ್ಪಲತಾ, ಬಿ ಎಲ್ ಒ ಗೀತಾಂಜಲಿ ಸೇರಿದಂತೆ ಅಪಾರ್ಟ್ಮೆಂಟ್ನ ನಿವಾಸಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯ ಮೂಲಕ ಕ್ಯಾಪಿನೋ ಅಪಾರ್ಟ್ಮೆಂಟ್ನ ನಿವಾಸಿಗಳಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಸಿಗ್ನೇಚರ್ ಕ್ಯಾಂಪೇನ್ ಗೆ ಚಾಲನೆ ನೀಡಿ ಮತದಾನದ ಮಹತ್ವದ ಬಗ್ಗೆ ತಿಳಿಸಲಾಯಿತು. ಅದರೊಂದಿಗೆ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.