ಕುಂದಾಪುರ: ಏ.14 (DaijiworldNews/SM): ನಾನು ನೂರಕ್ಕೆ ನೂರು ಬಿಜೆಪಿ. ಅದರಲ್ಲಿ ಸಂಶಯವೇ ಬೇಡ. ಅವಕಾಶ ಕೊಡದಕ್ಕೆ ಬೇಸರವಿಲ್ಲ. ನನಗೆ ಇಷ್ಟೇ ಯೋಗ. ಮಾಡಿದ ಕೆಲಸಕ್ಕೆ ತೃಪ್ತಿಯಿದೆ. ಆದರೆ ಪಕ್ಷ ಟಿಕೆಟ್ ವಿಚಾರದಲ್ಲಿ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಿದೆ. ಬೆಂಬಲ ನೀಡುವ ಬಗ್ಗೆ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಚರ್ಚಿಸಿ ಇನ್ನೆರಡು ದಿನದಲ್ಲಿ ನನ್ನ ನಿಲುವು ಏನು ಅನ್ನುವುದನ್ನು ತಿಳಿಸುವೆ ಎಂದು ಬಂದೂರಿನ ಹಾಲಿ ಶಾಸಕ, ಟಿಕೆಟ್ ವಂಚಿತ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಟಿಕೆಟ್ ಕೈತಪ್ಪಿದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಇಲ್ಲ ಅನ್ನುವುದನ್ನು3 ತಿಂಗಳು ಮೊದಲೇ ಹೇಳಬಹುದಿತ್ತು. ನಡ್ಡಾ, ಸಿಎಂ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿಯನ್ನು ಸೇರಿಸಿದ್ದೇನೆ. ಜನ ಸೇರಿಸುವ ಕೆಲಸ ಅಷ್ಟು ಸುಲಭವಲ್ಲ. ಮಾಜಿ ಸಿಎಂಗಳಾದ ಹೆಚ್ಡಿಕೆ ಕರೆ ಮಾಡಿ ಬನ್ನಿ ಎಂದಿದ್ದರು. ಆದರೆ ನಾನು ಬರುವುದಿಲ್ಲ ಅಂದಿದ್ದೇನೆ. ಬಿಎಸ್ವೈ ಹಾಗೂ ಸಿಎಂ ಬೊಮ್ಮಾಯಿ ಕರೆ ಮಾಡಿ, ನಾವು ನಿಮ್ಮೊಂದಿಗಿದ್ದೇವೆ. ಟಿಕೆಟಿಗಾಗಿ ನಾವು ಪ್ರಯತ್ನಿಸಿದ್ದು, ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ತಿಳಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವಷ್ಟು ಚಿಲ್ಲರೆ ಜನ ಅಲ್ಲ. ವಿರೋಧವಂತೂ ಮಾಡುವುದಿಲ್ಲ. ಒಳ್ಳೆಯದಾಗಲಿ ಎಂದು ಹಾರೈಸುವೆ ಎಂದಿದ್ದಾರೆ.
5 ವರ್ಷ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. 2013 ರಲ್ಲಿ ಸೋತಾಗ 15 ದಿನಗಳ ಹಿಂದೆಯಷ್ಟೇ ಟಿಕೆಟ್ ನೀಡಿದ್ದರೂ, ಹೋರಾಟ ಮಾಡಿದ್ದೇನೆ. ಆ ಬಳಿಕದ 5 ವರ್ಷ ಕ್ಷೇತ್ರದಾದ್ಯಂತ ಓಡಾಟ ಮಾಡಿ, ಪಕ್ಷವನ್ನು ಸಂಘಟಿಸಿ, ಪ್ರಬಲವಾಗಿಸಿ, ಲೋಕಸಭೆ, ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಗಳಲ್ಲಿ ಪಕ್ಷದ ಹೆಚ್ಚಿನ ಬೆಂಬಲಿತರು ಗೆಲ್ಲುವಲ್ಲಿ ಶ್ರಮಿಸಿದ್ದೇನೆ.
ಬಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಹಾಲಿ ಶಾಸಕ ಸುಕುಮಾರ್ ಶೆಟ್ಟರಿಗೆ ಟಿಕೆಟ್ ಕೊಡಬೇಕು ಎನ್ನುವ ಅಭಿಪ್ರಾಯ ಕ್ಷೇತ್ರದಾದ್ಯಂತ ಇತ್ತು. ಗೆಲ್ಲುವ ವಿಶ್ವಾಸವೂ ಇತ್ತು. ಮತ್ತೊಂದು ಬಾರಿಗೆ ಶಾಸಕರಾಗುವ ಭಾವನೆ ಕಾರ್ಯಕರ್ತರದ್ದಾಗಿತ್ತು. ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಿದೆಯೋ, ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡೋಣ. ನಾವೆಲ್ಲರೂ ಸುಕುಮಾರ್ ಶೆಟ್ಟರೊಂದಿಗೆ ಇದ್ದೇವೆ ಎಂದರು.
ಪಕ್ಷದ ಪ್ರಮುಖರಾದ ಪ್ರಿಯದರ್ಶಿನಿ ದೇವಾಡಿಗ, ಪ್ರಕಾಶ್ ಪೂಜಾರಿ ಜೆಡ್ಡು, ಹರ್ಕೂರು ಮಂಜಯ್ಯ ಶೆಟ್ಟಿ, ಆನಂದ ಖಾರ್ವಿ ಉಪ್ಪುಂದ, ಪತ್ರಿಕಾಗೋಷ್ಠಿಯಲ್ಲಿದ್ದರು.