ಉಡುಪಿ, ಏ 13 (DaijiworldNews/HR): "ಪಾಪ ಪ್ರಾಯಶ್ಚಿತ್ತಕ್ಕೆ ಸಿಎಂ ದೇಗುಲ ಭೇಟಿ ಮಾಡುತ್ತಿದ್ದಾರೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ದುರಾಚಾರ ಭ್ರಷ್ಟಾಚಾರ ಮಾಡಿದೆ. ಈಗ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಭೇಟಿ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, "ಪ್ರಧಾನ ನರೇಂದ್ರ ಮೋದಿ ಸಫಾರಿ ಮಾಡಿದರು ಹುಲಿ ಕಾಣಿಸಲಿಲ್ಲ. ಚಾಮರಾಜನಗರದಲ್ಲಿ ಕರೋನ ಸಂದರ್ಭದಲ್ಲಿ ದೊಡ್ಡ ಅವಘಡವಾಗಿತ್ತು. ಆಮ್ಲಜನಕ ಇಲ್ಲದೆ 34 ಜನ ಪ್ರಾಣ ಕಳೆದುಕೊಂಡಿದ್ದರು. ಆ ಕುಟುಂಬಕ್ಕೆ ಪ್ರಧಾನಿ ಮೋದಿಗಳು ಸಾಂತ್ವನ ಹೇಳಿಲ್ಲ" ಎಂದರು.
ಇನ್ನು ಎಲ್ಲಾ ಆಕಾಂಕ್ಷಿಗಳ ಸಮನ್ವಯ ಸಭೆ ನಡೆಸಲಾಗಿದೆ ಸರ್ವರು ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಲು ವಿನಂತಿಸಿದ್ದೇವೆ. ಬಿಜೆಪಿಯ ಹಲವಾರು ಹಿರಿಯ ನಾಯಕರು ಅವಕಾಶ ವಂಚಿತರಾಗಿದ್ದಾರೆ. 4 ವರ್ಷದಲ್ಲಿ ಒಳ್ಳೆ ಕೆಲಸ ಮಾಡಿದ್ದಲ್ಲಿ ಬದಲಾವಣೆ ಮಾಡುವ ಅಗತ್ಯ ಪಕ್ಷಕ್ಕೆ ಇರಲಿಲ್ಲ. ಕಳೆದ ವಿಧಾನಸಭೆಯಲ್ಲಿ ಒಟ್ಟು 32 ಮಂದಿ ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದರು, ಇದರಲ್ಲಿ ಬಿಜೆಪಿಯ 22 ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಇದ್ದರು ಬಿಜೆಪಿ ದೇಶಭಕ್ತ ಪಾರ್ಟಿ ಎನ್ನುತ್ತಿದ್ದರು ಆದರೆ ಅದು ಈಗ ಭೂಟಾಟಿಕೆ ಯು ಪಾರ್ಟಿಯಾಗಿದೆ. ಕಾಂಗ್ರೆಸ್ ನಲ್ಲಿ ಪಟ್ಟಿ ಬಿಡುಗಡೆ ಆದ ಮೇಲೆ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಎಣಿಸಿದ್ದರು, ಆದರೆ ಅದು ಫಲಿಸಲಿಲ್ಲ ಬಿಜೆಪಿಗೆ ಕೆಲವು ಕಡೆ ಅಭ್ಯರ್ಥಿಗಳೇ ಇಲ್ಲದೇ ಎರಡು ಎರಡು ಕಡೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
ಉಡುಪಿಯಲ್ಲಿ ಹಿಂದುತ್ವ ಹಿನ್ನೆಲೆ ಇರುವ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಣಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಭ್ಯರ್ಥಿ ಮಾತ್ರ ಅಲ್ಲ ಇಡೀ ಬಿಜೆಪಿಯೇ ಹಿಂದುತ್ವದ ಅಜೆಂಡಾ ಹೊಂದಿದೆ ಜನ ಸಾಮಾನ್ಯರ ಬದುಕಿನ ಕುರಿತಾದ ಅಜೆಂಡ ಇವರ ಬಳಿ ಇಲ್ಲ. ಜನರಲ್ಲಿ ಶಾಂತಿ ಕದಡಿ ದ್ವೇಷ ಭಾವನೆ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಬದುಕಿನ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತದೆ. ಇನ್ನು ಎರಡು ದಿನಗಳಲ್ಲಿ ಕಾಂಗ್ರೆಸ್ ನ ಮೂರನೇ ಪಟ್ಟಿ ಕೂಡಾ ರಿಲೀಸ್ ಆಗಲಿದೆ ಎಂದಿದ್ದಾರೆ.
ಉಡುಪಿ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್, ಕೃಷ್ಣಮೂರ್ತಿ ದಂಪತಿಗಳು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಕೆಲವೊಂದು ವಿಚಾರಗಳನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ ಅದನ್ನು ನಾನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಅವರು ಹಳೆ ಕಾಂಗ್ರೆಸ್ಸಿಗರು. ನಮಗೆ ಸಹಕಾರ ಕೊಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಕಚೇರಿಗೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ಮಾಡಿ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಇಡಿ ಐಟಿ ಸಿಬಿಐ ದುರ್ಬಳಕೆ ಮಾಡುತ್ತಿದೆ. ಎಲೆಕ್ಷನ್ ಕಮೀಷನ್ ನಲ್ಲಿ ಕೂಡಾ ಬಿಜೆಪಿಗೆ ಬೆಂಬಲ ನೀಡುವವರು ಇದ್ದಾರೆ. ಬೆಂಗಳೂರು ಹೆಚ್ ಎ ಎಲ್ ವಿಮಾನ ನಿಲ್ಧಾಣದಲ್ಲಿ ಬರುವ ಎಲ್ಲರ ಕಾರುಗಳನ್ನು ತಪಾಸಣೆ ಮಾಡುತ್ತಾರೆ. ಆದರೆ ಬಿಜೆಪಿ ನಾಯಕರು ಮತ್ತು ಮುಖ್ಯ ಮಂತ್ರಿಗಳ ಕಾರುಗಳನ್ನು ಚೆಕ್ಕಿಂಗ್ ಮಾಡೋದೇ ಇಲ್ಲ. ಏಕಪಕ್ಷೀಯವಾಗಿ ಮಾಡುತ್ತಿದ್ದಾರೆ ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದರು.
ಉಡುಪಿ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕೆಪಿಸಿಸಿಯ ಎಂಎ ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಮೃತ್ ಶೆಣೈ, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಶೇರಿಗಾರ್ ಉಪಸ್ಥಿತರಿದ್ದರು.