ಪುತ್ತೂರು, ಏ 13 (DaijiworldNews/HR): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಜೀವ ಮಠಂದೂರು ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಅವರ ಬೆಂಬಲಿಗರು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪಕ್ಷಕ್ಕಾಗಿ ದುಡಿಯುವಂತೆ ಮನವೊಲಿಸಲು ಸುದರ್ಶನ್ ಮೂಡುಬಿದಿರೆ ಅವರು ಮಠಂದೂರು ಅವರ ನಿವಾಸಕ್ಕೆ ಭೇಟಿ ನೀಡಿದಾಗ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಮುಖಂಡರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಸುದರ್ಶನ್ ಮೂಡುಬಿದಿರೆ ಅವರನ್ನು ಪಕ್ಷದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಜೀವ ಮಠಂದೂರು ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಏಕೆ? ಜಿಲ್ಲೆಯ ಜನಪ್ರತಿನಿಧಿಗಳ ನಿರ್ಧಾರಕ್ಕೆ ಬೆಲೆ ಇಲ್ಲವೇ? ಹಾಗಾದರೆ ನೀವು ಅ ಹುದ್ದೆಯಲ್ಲಿರುವುದು ಯಾಕೆ? ಮಠಂದೂರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ, ಅವರನ್ನು ಏಕೆ ಕಡೆಗಣಿಸಲಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ಪ್ರಾಮಾಣಿಕರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲ ಎಂದಾಯಿತು. ನಾವು ಬಿಜೆಪಿ ಪರವಾಗಿ ಕೆಲಸ ಮಾಡುವುದಿಲ್ಲ. ನೀವೇ ಪ್ರಚಾರ ಕಾರ್ಯ ನಡೆಸಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳಿ ಎಂದಿದ್ದಾರೆ.