ಬಂಟ್ವಾಳ, ಏ.12 (DaijiworldNews/SM): ಉಳ್ಳಾಲ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಸಚಿವ, ವಿಪಕ್ಷ ನಾಯಕ ಯು.ಟಿ.ಖಾದರ್ ಅವರು ಕೇಂದ್ರದ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ್ ಬಿಲ್ಲವ ಮುಖಂಡ ಬಿ.ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ಇಂದು ಬೇಟಿ ನೀಡಿ ಪೂಜಾರಿ ಅವರ ಕಾಲಿಗೆ ನಮಸ್ಕರಿಸಿ ಮುಂದಿನ ಚುನಾವಣೆಯ ಗೆಲುವಿಗಾಗಿ ಆಶಿರ್ವಾದ ಪಡೆದರು.
ಕಾಂಗ್ರೇಸ್ ಕಾರ್ಯಕರ್ತರು ಕುಟುಂಬದ ಸದಸ್ಯರು ಅವರಿಗೆ ಕಿಂಚಿತ್ತೂ ನೋವಾಗದ ರೀತಿಯಲ್ಲಿ ಜೊತೆಯಲ್ಲಿ ಕರೆದುಕೊಂಡು ಹೋಗಿ ಅವರ ನೋವು ನಲಿವುಗಳಿಗೆ ಸದಾ ಜೊತೆ ನಿಂತು ಪ್ರೋತ್ಸಾಹ ನೀಡಿ ಎಂದು ಶಾಸಕರಿಗೆ ಪೂಜಾರಿ ಅವರು ಕಿವಿಮಾತು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಪ್ರಚಂಡ ಬಹುಮತದ ಮೂಲಕ ಗೆಲುವು ಸಾಧಿಸಿ ಎಂದು ಹರಸಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಚುನಾವಣೆಯ ಸ್ಪರ್ಧೆಯ ಮುನ್ನ ಹಿರಿಯ ಕಾಂಗ್ರೆಸ್ ನಾಯಕ ಕರಾವಳಿ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಿದ ಪೂಜಾರಿ ಅವರ ಮಾರ್ಗದರ್ಶನ ಸಲಹೆ ಸೂಚನೆ ಹಾಗೂ ಆಶ್ರೀರ್ವಾದ ಪಡೆಯಲು ಮನೆಗೆ ಬಂದಿದ್ದೇನೆ.
ನಾನು ವಿದ್ಯಾರ್ಥಿ ದೆಸೆಯಿಂದ ರಾಜಕೀಯವಾಗಿ ಬೆಳೆದು ಇಷ್ಟು ಎತ್ತರಕ್ಕೆ ಬೆಳೆಯಲು ಪೂಜಾರಿ ಅವರೇ ಕಾರಣ.ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಜನರ ಗೌರವಕ್ಕೆ ಚ್ಯುತಿ ಬರದ ರೀತಿಯ ಲ್ಲಿ ಕೆಲಸ ಮಾಡಿದ್ದೇನೆ,ಮುಂದೆಯೂ ಜನ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದ್ದು, ಕ್ಷೇತ್ರದ ಜನರ ಜೊತೆ ಜಿಲ್ಲೆಯ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತೇನೆ. ಸರ್ವ ಜನರ ಸರ್ವ ಧರ್ಮವನ್ನು ಪ್ರೀತಿ ಮಾಡಿಕೊಂಡು ಅಭಿವೃದ್ಧಿ ಕಾರ್ಯಮಾಡುತ್ತೇನೆ ಎಂದು ಅವರು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಮಾತ್ರ ಪೂಜಾರಿ ಅವರ ಮನೆಗೆ ಕಾಂಗ್ರೇಸ್ ನಿಯೋಗ ಬೇಟಿ ನೀಡಿ ಆಶ್ರೀರ್ವಾದ ಪಡೆಯುತ್ತಾರೆ ಎಂಬ ಆರೋಪದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬಿಜೆಪಿಯವರು ಸುಳ್ಳು ಅಪಪ್ರಚಾರಗಳ ಮೂಲಕ ಪ್ರಚಾರ ಪಡೆಯಲು ಹೊರಟಿದೆ. ಅಪಪ್ರಚಾರದ ಮೂಲಕ ಪೂಜಾರಿ ಅವರನ್ನು ಸೋಲಿಸಿ ಇಂದಿನ ದಿನಗಳಲ್ಲಿ ಅನುಕಂಪವನ್ನು ತೋರಿಸುವ ಬಿಜೆಪಿಯವರನ್ನು ನಂಬುವವರಿಲ್ಲ.
ಚಾಕು ತೋರಿಸಿ ಬೆದರಿಕೆ ಪತ್ರ ಹಾಕಿದ ಬಿಜೆಪಿ ಕಾರ್ಯಕರ್ತರು ಜೈಲು ಪಾಲಾಗಿದ್ದಾರೆ ಇದೆಲ್ಲವನ್ನು ಜನ ಗಮನಿಸಿದ್ದಾರೆ ಎಂದು ಅವರು ತಿಳಿಸಿದರು.
ಮುಡಿಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಾಜವ , ಪ್ರಮುಖರಾದ ಚಂದ್ರಹಾಸ ಕರ್ಕೇರ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಉಮ್ಮರ್ ಫಾರೂಕ್ ಪರಂಗಿಪೇಟೆ, ಪ್ರವೀಣ್ ಅಳ್ಚ, ದೇವದಾಸ ಭಂಡಾರಿ, ದೀಪಕ್ ಪಿಲಾರ್, ಮಹಮ್ಮದ್ ಮೋನು, ಕೃಷ್ಣ ಗಟ್ಟಿ,ಚಂದ್ರಿಕಾ, ರಮ್ಲಾನ್ ಮಾರಿಪಳ್ಳ,ಈಶ್ವರ್ ಉಳ್ಳಾಲ್, ಅಬ್ದುಲ್ ಜಲೀಲ್ , ನಾಸೀರ್ ನಡುಪದವು, ದೇವಣ್ಣ ಶೆಟ್ಟಿ, ದೇವದಾಸ್ ಭಂಡಾರಿ, ಸುರೇಶ್ ಭಟ್ ನಗರ, ಇಕ್ಬಾಲ್ ಸುಜೀರು, ಬಾಬು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು