ಉಡುಪಿ, ಏ 12 (DaijiworldNews/MS): "ಟಿಕೆಟ್ ತಪ್ಪಿರುವುದಕ್ಕೆ ಬೇಸರವಿಲ್ಲ, ಆದರೆ ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದ ನನಗೆ ನೋವಾಗಿದೆ" ಎಂದು ಶಾಸಕ ಕೆ. ರಘುಪತಿ ಭಟ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಶಾಸಕ ಕೆ. ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬುಧವಾರ ಅವರ ಮನೆ ಮುಂದೆ ನೂರಾರು ಸಂಖ್ಯೆಯ ಕಾರ್ಯಕರ್ತರು ಸೇರಿದ್ದು, ಮಾಧ್ಯಮದೊಂದಿಗೆ ಮಾತನಾಡಿ, "ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದ ನೋವಾಗಿದೆ. ಯಾವೊಬ್ಬ ನಾಯಕರೂ ನನಗೆ ಕಾಲ್ ಮಾಡಿ ಮಾತನಾಡಿಲ್ಲ. ಒಬ್ಬ ಜಿಲ್ಲಾಧ್ಯಕ್ಷರೂ ನನಗೆ ಕರೆ ಮಾಡಿ ತಿಳಿಸಿಲ್ಲ. ಟಿವಿ ಸುದ್ದಿಗಳ ಮೂಲಕ ಟಿಕೆಟ್ ನಿರಾಕರಿಸಿದ ಸುದ್ದಿ ತಿಳಿಯಿತು. ಇದು ಪಕ್ಷದ ನಿರ್ಧಾರವನ್ನು ನಾನು ತಿಳಿದುಕೊಳ್ಳಬೇಕಾದ ಮಾರ್ಗವೇ?. ಅಮಿತ್ ಶಾ ಅವರು ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಬದಲಾವಣೆಗಳ ಬಗ್ಗೆ ತಿಳಿಸಿದ್ದರು, ಅಮಿತ್ ಶಾ ನನ್ನನ್ನು ಕರೆಯುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಮತ್ತು ಕನಿಷ್ಠ ಪಕ್ಷ ಜಿಲ್ಲಾಧ್ಯಕ್ಷರಾದರೂ ಇದನ್ನು ಮಾಡಬಹುದಿತ್ತು" ಎಂದು ಬೇಸರಿಸಿದ್ದಾರೆ.
"ನನಗೆ ಟಿಕೆಟ್ ಸಿಗಲ್ಲ ಎನ್ನುವ ಬಗ್ಗೆ ಕನಸು ಮನಸ್ಸಿನಲ್ಲಿ ಊಹೆ ಮಾಡಿರಲಿಲ್ಲ. ಜಾತಿಯ ಕಾರಣಕ್ಕೆ ಬದಲಾವಣೆ ಮಾಡುತ್ತಾರೆ ಎನ್ನುವ ಆಲೋಚನೆ ಇರಲಿಲ್ಲಇದನ್ನು ನಾನು ಇದಕ್ಕೆ ಒಪ್ಪುವುದಿಲ್ಲ. ಪಕ್ಷದ ನಾಯಕತ್ವ, ಮೋದಿಯ ಬಗ್ಗೆ ಬೇಸರವಿಲ್ಲ. ನಾನು ಪಾರ್ಟಿಗೆ ಇಷ್ಟು ಬೇಡವಾದೆವೋ? ನನ್ನನ್ನು ಕೇಳಿ ಮಾಡುತ್ತಿದ್ದರೆ ನಾನೇ ರಾಜೀನಾಮೆ ಕೊಡುತ್ತಿದ್ದೆ. ಇಂದು ಪಕ್ಷ ಎತ್ತರಕ್ಕೆ ಬೆಳೆದಿದೆ. ಹಾಗಾಗಿ ಪಕ್ಷಕ್ಕೆ ನಾವೀಗ ಬೇಕಾಗಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಪಕ್ಷಕ್ಕಾಗಿ ಅವಿರತವಾಗಿ ದುಡಿದಿದ್ದೇನೆ.ಸ ದ್ಯ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ.ಅಕ್ಷರಶಃ ಶಾಕ್ ಆಗಿದ್ದೇನೆ.ನಿನ್ನೆ ಬೆಳಗಿನ ಜಾವದವರೆಗೂ ಕಾರ್ಯಕರ್ತರು ನನಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದರು. ಇನ್ನು ಮುಂದೆಯೂ ಕಾರ್ಯಕರ್ತರ ಕಷ್ಟಕ್ಕೆ ನಾನಿದ್ದೇನೆ".
"ಟಿಕೆಟ್ ಪಡೆದ ಯಶ್ ಪಾಲ್ ಸುವರ್ಣ ನಾನು ಬೆಳೆಸಿದ ಹುಡುಗ.ಯಶ್ ಪಾಲ್ ಸುವರ್ಣಗೆ ಟಿಕೆಟ್ ನೀಡಿದ ಬಗ್ಗೆ ಸಂತೋಷವಿದೆಹಿರಿಯ ನಾಯಕರಿದ್ದಾಗಲು ಪಕ್ಷ ನನಗೆ ಇದೇ ರೀತಿ ಟಿಕೆಟ್ ನೀಡಿತ್ತು.ಆದರೆ ಪಕ್ಷದ ಪ್ರಚಾರಕ್ಕೆ ನನ್ನ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ.ನನಗೆ ಈ ಶಾಕ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.ಮೂರು ಬಾರಿ ಶಾಸಕನಾದವನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು.ಪಕ್ಷ ನನಗೆ ಕೊಟ್ಟಿರುವ ಅವಕಾಶಗಳ ಬಗ್ಗೆ ನಾನು ಕೃತಜ್ಞನಾಗಿರುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ" ಎಂದು ಹೇಳಿದ್ದಾರೆ.