ಮಂಗಳೂರು, ಏ 11(DaijiworldNews/SM): ಕೊನೆಗೂ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಕಾಂಗ್ರೆಸ್ ತೆಕ್ಕೆಯಲ್ಲಿರುವ ಉಳ್ಳಾಲ ಕ್ಷೇತ್ರಕ್ಕೆ ಸತೀಶ್ ಕುಂಪಲ ಅವರನ್ನು ಕಣಕ್ಕಿಳಿಸಲಾಗಿದೆ.
ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ. ಆರು ಬಾರಿ ಶಾಸಕರಾಗಿರುವ ಹಾಗೂ ಹಾಲಿ ಸಚಿವರಾಗಿರುವ ಎಸ್. ಅಂಗಾರ ಅವರನ್ನು ಈ ಬಾರಿ ಕೈ ಬಿಡಲಾಗಿದೆ. ಅವರ ಬದಲಾಗಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆ ಭಾಗೀರಥಿ ಅವರನ್ನು ಕಣಕ್ಕಿಳಿಸಲಾಗಿದೆ. ಮತ್ತೊಂದೆಡೆಯಲ್ಲಿ ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸಂಜೀವ ಮಠಂದೂರು ಅವರನ್ನು ಕೂಡ ಬಿಜೆಪಿ ಕೈಬಿಟ್ಟಿದೆ. ಅವರ ಬದಲಾಗಿ ಅದೇ ಸಮುದಾಯದ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ಕೊಡಲಾಗಿದೆ.
ಇನ್ನು ಕಾಂಗ್ರೆಸ್ ಭದ್ರಕೋಟೆ ಎಣಿಸಿಕೊಂಡಿರುವ ಉಳ್ಳಾಲ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಈ ಹಿಂದೆ ಖಾದರ್ ವಿರುದ್ಧ ಸಂತೋಷ್ ಬೋಳಿಯಾರ್ ಅವರು ಸೋಲುಂಡಿದ್ದರು. ಈ ಬಾರಿ ಉಳ್ಳಾಲ ಕ್ಷೇತ್ರಕ್ಕೆ ಸತೀಶ್ ಕುಂಪಲ ಅವರನ್ನು ಕಣಕ್ಕಿಳಿಸಲಾಗಿದೆ. ಆ ಮೂಲಕ ಉಳ್ಳಾಲದಲ್ಲಿ ಚುನಾವಣೆ ಗೆಲ್ಲಬೇಕೆನ್ನುವ ಕಾತರದಲ್ಲಿ ಬಿಜೆಪಿ ಲೆಕ್ಕಾಚಾರ ಹಾಕಿಕೊಂಡಿದೆ.
ಇನ್ನುಳಿದಂತೆ ಮಂಗಳೂರು ಉತ್ತರ ಕ್ಷೇತ್ರದಿಂದ ಹಾಲಿ ಶಾಸಕ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಹಾಲಿ ಶಾಸಕ ವೇದವ್ಯಾಸ್ ಕಾಮತ್, ಬಂಟ್ವಾಳ ಕ್ಷೇತ್ರದಿಂದ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಬೆಳ್ತಂಗಡಿ ಕ್ಷೇತ್ರದಿಂದ ಶಾಸಕ ಹರೀಶ್ ಪೂಂಜಾ, ಮೂಡುಬಿದಿರೆ ಕ್ಷೇತ್ರದಿಂದ ಶಾಸಕ ಉಮಾನಾಥ ಕೊಟ್ಯಾನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮೂರು ಹೊಸ ಮುಖಗಳನ್ನು ಬಿಜೆಪಿ ಪರಿಚಯಿಸಿದ್ದು, ಆ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಗೆಲುವು ದಾಖಲಿಸಲೇ ಬೆಕೆಂವುದು ಬಿಜೆಪಿ ಚಿಂತನೆ.