ತಿರುವನಂತಪುರ: ಭಾರತದಲ್ಲಿ ಹೆಣ್ಣು ಮಗು ಹುಟ್ಟಿದೆ ಅಂದ್ರೆ ಮೂಗು ಮುರಿಯೋರು ಅದೆಷ್ಟೋ ಮಂದಿ. ಆದ್ರೆ ಮಲಪ್ಪುರಂ ಜಿಲ್ಲೆಯ ಪುರಸಭೆಯ ವ್ಯಾಪ್ತಿಯ ಜನ ಮಾತ್ರ ಲಕ್ಷ್ಮಿ ಮನೆಗೆ ಬಂದಂತೆ ಖುಷಿ ಪಡುತ್ತಾರೆ ಅದಕ್ಕೆ ಕಾರಣವಿದೆ. ಹೆಣ್ಣು ಮಗು ಎಂದರೆ ತಾತ್ಸರದಿಂದ ನೋಡುತ್ತಿದ್ದ ಈ ಭಾಗದ ಜನರ ಮನೋಭಾವ ಬದಲಾವಣೆಯಾಗಿದ್ದು ಒಬ್ಬ ವ್ಯಕ್ತಿಯಿಂದ . ಅವರೇ ಪುರಸಭೆ ಕೌನ್ಸಿಲರ್ 38 ವರ್ಷ ವಯಸ್ಸಿನ ಅಬ್ದುಲ್ ರಹೀಮ್. ಇವರು ತನ್ನ ವಾರ್ಡ್ ನಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ಅದರ ಸಂಭ್ರಮಾಚರಣೆಯ ಜೊತೆಗೆ ಆ ಕುಟುಂಬಕ್ಕೆ ಒಂದು ಗ್ರಾಂ ಚಿನ್ನ ನೀಡುತ್ತಿದ್ದಾರೆ.
ಹೆಣ್ಣು ಮಗು ಹುಟ್ಟಿದರೆ ಶಾಪ ಹಾಕುವ ಜನರನ್ನು ನಾನು ನೋಡಿದ್ದೇನೆ. ಆದರೆ ನಿಜಕ್ಕೂ ಈಕೆ ಕುಟುಂಬಕ್ಕೆ ಸಂಪತ್ತು ತರುತ್ತಾಳೆ.ಹೆಣ್ಣಿಲ್ಲದ ಜಗತ್ತು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಇವರು ಕೂಡಾ 4 ವರ್ಷದ ಮಗುವಿನ ತಂದೆ.ಹುಟ್ಟಿದ ಮಗು ಹೆಣ್ಣಾದ್ರೆ ಸಾಕು ಆಸ್ಪತ್ರೆಯಿಂದಲೇ ರಹೀಮ್ ಅವರಿಗೆ ಕರೆ ಬರುತ್ತದೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಅವರು ಚಿನ್ನದ ನಾಣ್ಯವನ್ನು ನೀಡಿ ಗಿಫ್ಟ್ ನೀಡುತ್ತಾರೆ.
ಮಹಿಳೆಗೆ ಹೆಣ್ಣು ಮಗು ಹುಟ್ಟಿದ ವಿಚಾರವನ್ನು ನಮಗೂ ತಿಳಿಸಿ, ನಾವು ಕೂಡ ಚಿನ್ನ ಕೊಡುತ್ತೇವೆ ಎಂದು ಕೊಟ್ಟಕ್ಕಲ್ ನ ಪ್ರಮುಖ ಆಭರಣ ಮಳಿಗೆಗಳು ರಹೀಮ್ ಅವರೆ ಮುಂದೆ ಆಫರ್ ಪ್ರಸ್ತಾಪಿಸಿದ್ದವು. ಆದ್ರೆ ರಹೀಮಾನ್ ಮಳಿಗೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಅಂತ ಹೇಳಿದ್ದಾರೆ.