ಬಂಟ್ವಾಳ, ಏ 11(DaijiworldNews/SM): ನರಿಕೊಂಬು ನಾಯಿಲದ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ರಜಾ ಅವಧಿಯಲ್ಲಿ ಬಾವಿಯೊಂದನ್ನು ತೋಡಿ ಗಮನ ಸೆಳೆದಿದ್ದು, ಇದೀಗ ಬಾವಿಯಲ್ಲಿ ಬರೋಬ್ಬರಿ ನೀರು ತುಂಬಿ ಅವರ ಕುಟುಂಬ ಸಂತಸದಲ್ಲಿದೆ.
ನಾಯಿಲ ನಿವಾಸಿ ಲೋಕನಾಥ್ ಅವರ ಪುತ್ರ ಸೃಜನ್ ಎಂಬಾತ ಬಾವಿ ಕೊರೆದ ವಿದ್ಯಾರ್ಥಿಯಾಗಿದ್ದಾನೆ. ಅವರ ಮನೆಗೆ ನಳ್ಳಿ ನೀರೇ ಆಶ್ರಯವಾಗಿದ್ದು, ಆದರೆ ಹಲವು ಕಾರಣಕ್ಕೆ ನೀರು ಪದೇ ಪದೇ ಕೈಕೊಡುತ್ತಿದ್ದ ಪರಿಣಾಮ ನೀರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಬಾಲಕ ಯಾವಾಗಲೂ ತಾನು ಬಾವಿ ಕೊರೆಯುವುದಾಗಿ ಹೇಳುತ್ತಿದ್ದ. ಆದರೆ ಮನೆಯವರು ಅದನ್ನು ಗಂಭೀರವಾಗಿ ಪರಿಗಣಿಸದೆ ಬೈಯುತ್ತಿದ್ದರು.
ಸೃಜನ್ ಪ್ರಥಮ ಪಿಯುಸಿ ಪರೀಕ್ಷೆ ಬರೆದು ರಜೆಯಲ್ಲಿ ಒಬ್ಬನೇ ಬಾವಿ ತೋಡಲು ಆರಂಭಿಸಿ ಕಳೆದ ವಾರ ಆತನಿಗೆ ಬೇಕಾದಷ್ಟು ನೀರು ಲಭಿಸಿದೆ. ಬಾವಿ ಆಳವಾಗುತ್ತಿದ್ದಂತೆ ಮೂರ್ನಾಲ್ಕು ಬುಟ್ಟಿಯಲ್ಲಿ ಮಣ್ಣು ತುಂಬಿಸಿ ಬಳಿಕ ಮೇಲೆ ಬಂದು ಅದನ್ನು ಒಬ್ಬನೇ ಎಳೆದು ಮಣ್ಣು ಖಾಲಿ ಮಾಡುತ್ತಿದ್ದನು.
ಸುಮಾರು 24 ಅಡಿ ಆಳದಲ್ಲಿ ನೀರು ಲಭಿಸಿದ್ದು, 3 ಅಡಿಯಷ್ಟು ನೀರು ತುಂಬಿಕೊಂಡಿದೆ. ಈ ಬೇಸಗೆಯಲ್ಲೂ ಅಷ್ಟೊಂದು ಪ್ರಮಾಣದ ನೀರು ಲಭಿಸಿರುವುದು ವಿಶೇಷವಾಗಿದೆ. ಸೃಜನ್ ಸಾಹಸವನ್ನು ಕಂಡು ಮನೆ ಮಂದಿ ಸಂತಸ ಪಟ್ಟಿರುವ ಜತೆಗೆ ಊರಿನ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ