ಕಾರ್ಕಳ, ಏ 11(DaijiworldNews/MS): ಪ್ರಾಣಿದಯೆ ತೋರಿದ ಮಹಿಳೆಗೆ ಜೀವಬೆದರಿಕೆಯೊಡ್ಡಿದ ಆರೋಪಿಯೊಬ್ಬನಿಗೆ ಕಾರ್ಕಳ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
2022 ಜೂನ್ 06 ರಂದು ಈ ಘಟನೆಯೂ ನಗರದ ನೇತ್ರಾವತಿ ಬಿಲ್ಡಿಂಗ್ ಬಳಿಯಲ್ಲಿ ನಡೆದಿತ್ತು.ಪ್ರಕರಣದ ದೂರುದಾರರಾದ ಸುಮತಿ ನಾಯ್ಕ ತನ್ನ ಮಗ ಆಶಿಶ್ ನೊಂದಿಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಕಾರ್ಕಳ ಪೇಟೆಗೆ ಹೊರಟಿದ್ದರು. ಕಾರ್ಕಳ ನಗರದ ನೇತ್ರಾವತಿ ಬಿಲ್ಡಿಂಗ್ ಹತ್ತಿರ ತಲುಪುವಾಗ ರಸ್ತೆ ಬದಿಯಲ್ಲಿ ನಾಯಿಯೊಂದು ಬೆಕ್ಕಿನ ಮರಿಯನ್ನು ಕಚ್ಚುತ್ತಿತ್ತು.ಅದನ್ನು ಕಂಡ ಸುಮತಿ ನಾಯ್ಕ ಅವರು ತನ್ನ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಬೆಕ್ಕಿನ ಮರಿಯನ್ನು ರಕ್ಷಿಸಿದರು. ಪ್ಲಾಸ್ಟಿಕ್ ಕವರ್ನಲ್ಲಿ ಆ ಬೆಕ್ಕಿನ ಮರಿಯನ್ನು ಹಾಕಿ ರಸ್ತೆ ಹತ್ತಿರದ ಪೊದೆಯಲ್ಲಿ ಬಿಡಲು ಮುಂದಾಗಿದ್ದರು.
ಅದನ್ನು ಕಂಡ ಮೀನು ಮಾರುತ್ತಿದ್ದ ಆರೋಪಿ ಪ್ರವೀಣ್ ಕ್ಲಾರೆನ್ಸ್ ಪಿಂಟೋ ಘಟನಾ ಸ್ಥಳಕ್ಕೆ ಬಂದು ಇಲ್ಲಿಗೇಕೆ ಬೆಕ್ಕಿನ ಮರಿಯನ್ನು ಬಿಡುತ್ತೀಯಾ ಎಂದು ಸುಮತಿ ನಾಯ್ಕ ಅವರನ್ನು ಉದ್ದೇಶಿಸಿ,ಅವಾಚ್ಯ ಶಬ್ದಗಳಿಂದ ನಿಂದನೆಗೈದು, ಹಲ್ಲೆಗೆ ಮುಂದಾಗಿದ್ದನು.ಅದೇ ಸಂದರ್ಭದಲ್ಲಿ ಸುಮತಿಯ ಜೊತೆಗಿದ್ದ ಅವರ ಮಗ ಆಶಿಶ್ನು ತಾಯಿಯನ್ನು ರಕ್ಷಿಸಿದನು.
ಸುಮತಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಆರೋಪಿ ಪ್ರವೀಣ್ ಕ್ಲಾರೆನ್ಸ್ ಅಡ್ಡ ಹಾಕಿ ತಡೆದಿದ್ದನು.ಈ ಬಗ್ಗೆ ಆರೋಪಿಯ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿತ್ತು.ನಗರ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೊಂಡ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟರು. ಆರೋಪಿಯಾಗಿದ್ದ ಪ್ರವೀಣ್ ಕ್ಲಾರೆನ್ಸ್ ಪಿಂಟೋ ಅವನನ್ನು ಅಪರಾಧಿ ಎಂದು ಘೋಷಿಸಿ ಕಲಂ509, ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ಸಂಬಂಧಿಸಿ ಬಿಡುಗಡೆ ಮಾಡಲಾಗಿದೆ.
ಕಲಂ.341 ಭಾರತೀಯ ದಂಡ ಸಂಹಿತ ಅಡಿಯ ಅಪರಾಧಕ್ಕೆ ರೂ.500- ದಂಡ, ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸದಾ ಸಜೆ ಮತ್ತು ಕಲಂ.504 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ರೂ.1,000- ದಂಡ, ದಂಡ ತರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಸಜೆ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕರಾದ ಶೋಭಾ ಮಹಾದೇವ ನಾಯ್ಕ ಮತ್ತು ರಾಜಶೇಖರ ಪಿ ಶಾಮರಾವ್ ಇವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿದರು.
ಸಹಾಯಕ ಸರಕಾರಿ ಅಭಿಯೋಜಕ ರಾಜಶೇಖರ ಪಿ ಶಾಮರಾವ್ ವಾದ ಮಂಡಿಸಿರುತ್ತಾರೆ.