ಕಾಸರಗೋಡು, ಏ 11(DaijiworldNews/MS): ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಅಡೂರಿನಲ್ಲಿ ನಡೆದಿದೆ. ಅಡೂರು ದೇವರಡ್ಕದ ನಿವಾಸಿ ಶಾಫಿ ಎಂಬವರ ಪುತ್ರ ಮುಹಮ್ಮದ್ ಆಶೀಕ್ (3.5) ಮತ್ತು ಹಸೈನಾರ್ ರವರ ಪುತ್ರ ಮುಹಮ್ಮದ್ ಫಾಸಿಲ್ (3) ಮೃತಪಟ್ಟವರು.
ಏ. 11ರ ಮಂಗಳವಾರ ಮಧ್ಯಾಹ್ನ ಅಡೂರು ದೇವರಡ್ಕದಲ್ಲಿ ಹೊಳೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ ಇತರ ಮಕ್ಕಳು ಕೂಡಲೇ ಸ್ಥಳೀಯರಿಗೆ ತಿಳಿಸಿದ್ದು, ಧಾವಿಸಿ ಬಂದ ಪರಿಸರವಾಸಿಗಳು ಮಕ್ಕಳನ್ನು ಮೇಲಕ್ಕೆತ್ತಿ ಮುಳ್ಳೆರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಆದೂರು ಠಾಣಾ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.