ಪುತ್ತೂರು, ಏ 10 (DaijiworldNews/HR): ಉಪ್ಪಿನಂಗಡಿ ಸಮೀಪದ ಪೆರ್ಣೆ ಎಂಬಲ್ಲಿ 2013ರ ಏಪ್ರಿಲ್ 9ರಂದು ಸಂಭವಿಸಿದ ಭೀಕರ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ ವಿವಿಧ ಕುಟುಂಬಗಳ 13 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡು 10 ವರ್ಷಗಳು ಕಳೆದರೂ, ದುರಂತದ ಮಾನಸಿಕ ಗಾಯ ಇನ್ನೂ ಮಾಸಿಲ್ಲ.
ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಾಟದ ಟ್ಯಾಂಕರ್ ಪೆರ್ನೆ ತಿರುವಿನಲ್ಲಿ ಅಪಘಾತಕ್ಕೀಡಾಗಿ ಮಗುಚಿ ಬಿತ್ತು. ಈ ಪರಿಣಾಮ ಅನಿಲ ಸೋರಿಕೆಯುಂಟಾಗಿ ಅಗ್ನಿ ಸ್ಪರ್ಶಗೊಂಡ ಕಾರಣ ಬೆಂಕಿಯ ಕೆನ್ನಾಲಿಗೆಯು ಪರಿಸರದಾದ್ಯಂತ ವ್ಯಾಪಿಸಿ ಮನೆ, ಅಂಗಡಿಯೊಳಗಿದ್ದ ಜನರೆಲ್ಲಾ ಬೆಂಕಿಗೆ ಸಿಲುಕಿದರು. ಇದರಿಂದಾಗಿ ಮಹಿಳೆ ಮಕ್ಕಳನ್ನು ಒಳಗೊಂಡಂತೆ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಾಳುಗಳ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಘಟನೆಯಲ್ಲಿ ಸಿಲುಕಿ ಮೈಯಲ್ಲಿದ್ದ ಬಟ್ಟೆ ಬರೆಯೆಲ್ಲಾ ಸುಟ್ಟು , ಮೈ ಚರ್ಮ ಸುಟ್ಟು ಜೀವ ಉಳಿಸಲು ಯುವಕನೋರ್ವ ಹೆದ್ದಾರಿಯಲ್ಲಿ ಓಡೋಡಿ ಬರುತ್ತಿರುವ ಹೃದಯ ವಿದ್ರಾವಕ ದೃಶ್ಯವೊಂದು ವಿಡಿಯೋ ಚಿತ್ರೀಕರಣದಲ್ಲಿ ಸೆರೆಯಾಗಿತ್ತು.
ಇನ್ನು ಗ್ರಾಮದ ದೈವವೊಂದರ ಆರಾಧನೆ ನಿಂತಿರುವುದರಿಂದ ಕೆಲ ಸಮಯದಲ್ಲೇ ಗ್ರಾಮದಲ್ಲಿ ಭೀಕರವಾದ ಅನಾಹುತವೊಂದು ಸಂಭವಿಸಲಿದೆ ಎಂಬ ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತಗೊಂಡ ಎಚ್ಚರಿಕೆಯ ಬೆನ್ನಲ್ಲೇ ಈ ಅವಘಡ ಸಂಭವಿಸಿತ್ತು.