ಉಡುಪಿ, ಮಾ 23(MSP): ಲೋಕಸಭಾ ಚುನಾವಣೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕಣಕ್ಕಿಳಿದಿದ್ದಾರೆ. ಆದ್ರೆ ಪಕ್ಷ ಟಿಕೆಟ್ ನೀಡುವ ಮುಂಚೆ ಟಿಕೆಟ್ ಗಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮೊಗವೀರ ನಾಯಕ ಯಶ್ ಪಾಲ್ ಸುವರ್ಣ ಇವರಿಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಗೆ ಬಿಜೆಪಿ ಹಾಲಿ ಸಂಸದೆ ಶೋಭಾ ಅವರಿಗೆ ಮಣೆ ಹಾಕಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, "ಲೋಕಸಭಾ ಟಿಕೇಟು ವಂಚಿತನಾದರೂ ನಾನು ಸಹಸ್ರಾರು ಕಾರ್ಯಕರ್ತರ ಅಭಿಮಾನ ಗಳಿಸಿದ್ದೇನೆ, ಇದೂ ನನಗೆ ಚುನಾವಣೆ ಗೆದ್ದಷ್ಟೇ ಖುಷಿ ನೀಡಿದೆ ನನ್ನನ್ನು ಬೆಂಬಲಿಸಿದ ಎಲ್ಲಾ ಕಾರ್ಯಕರ್ತಮಿತ್ರರಿಗೂ ಹೃದಯಾಂತರಾಳದ ಕೃತಜ್ಙತೆಗಳು" ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ನಾನು ಬಿಜೆಪಿಯ ಅಭ್ಯರ್ಥಿಯಾಗಬೇಕು ಎಂದು ಪಕ್ಷದ ಹಿರಿಯರು,ಕಾರ್ಯಕರ್ತಮಿತ್ರರು ಮತ್ತು ಹಿತೈಷಿಗಳು ಬಯಸಿದ ಕಾರಣ ನಾನು ಟಿಕೇಟು ಅಪೇಕ್ಷಿತನಾಗಿದ್ದೆ. ಟಿಕೇಟ್ ಅಂತಿಮಗೊಳ್ಳುವ ಕೊನೆಯ ಹಂತದವರೆಗೂ ನನ್ನ ಹೆಸರು ಮುಂಚೂಣಿಯಲ್ಲಿತ್ತು. ದಿಲ್ಲಿಯಲ್ಲಿ ನಡೆದ ವರಿಷ್ಠರ ಸಭೆಯಲ್ಲೂ ಅನೇಕ ಬಾರಿ ನನ್ನಂಥ ಸಾಮಾನ್ಯ ಕಾರ್ಯಕರ್ತನ ಹೆಸರು ಪ್ರಸ್ತಾಪವಾಗಿದೆ. ಇದು ನನ್ನ ಮೇಲೆ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತ ಮಿತ್ರರು ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ. ಸಂಘ ಪರಿವಾರದಿಂದ ಬಂದ ನನಗೆ, ಬದುಕಿನಲ್ಲಿ ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಗುರಿಯೆಡೆಗೆ ಮುನ್ನಡೆಯಬೇಕು ಎಂದು ಶಿಕ್ಷಣ ನೀಡಿದೆ.
ಇದಕ್ಕಿಂತ ಉತ್ತಮ ಅವಕಾಶ ಮುಂದೆ ನಮಗಾಗಿ ಕಾಯುತ್ತಿರಬಹುದು ಎಂಬ ಭರವಸೆಯೊಂದಿಗೆ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ನನ್ನ ಕಾರ್ಯವನ್ನು ಮುಂದುವರಿಸುತ್ತೇನೆ. ಪಕ್ಷದ ಹಿರಿಯರಾಗಿರುವ ಹಾಲಿ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ಅವರ ಪರವಾಗಿ ಇಂದಿನಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಕರಾವಳಿಯಲ್ಲಿ ಮತ್ತೊಮ್ಮೆ ಕೇಸರಿ ಕೋಟೆಯನ್ನು ಭದ್ರಪಡಿಸುವ ಕಾರ್ಯಕ್ಕೆ ನಾವೆಲ್ಲಾ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಇದೇ ವೇಳೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ನಮ್ಮ ಅಭ್ಯರ್ಥಿ ಕಳೆದ ಲೋಕಸಭೆ ಚುನಾವಣೆಗಿಂತಲೂ ಎರಡು ಲಕ್ಷಕ್ಕೂ ಅಧಿಕ ಮತದಿಂದ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ