ಬೆಳ್ತಂಗಡಿ, ಏ 9 (DaijiworldNews/MS): ಹೊಟ್ಟೆನೋವಿನಿಂದ ನರಳಿ ಆಸ್ಪತ್ರೆಗೆ ದಾಖಲಾದ ಗೆಳತಿಯರಿಬ್ಬರು ಅನುಮಾನಸ್ಪದವಾಗಿ ಎ.6 ರಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮೇಲ್ನೋಟದ ತನಿಖೆಯಲ್ಲಿ ವಿಷ ಪ್ರಾಶನವೇ ಕಾರಣ ಎಂಬುದು ತಿಳಿದುಬಂದಿದೆ.
ಪಟ್ರಮೆ ಗ್ರಾಮದ ಪಟ್ಟೂರು ಬಾಬು ಎಂಬವರ ಪುತ್ರಿ ರಕ್ಷಿತಾ (22) ಅವರ ಗೆಳತಿ ಶ್ರೀನಿವಾಸ ಆಚಾರ್ಯ ಎಂಬವರ ಪುತ್ರಿ ಲಾವಣ್ಯ (21) ಒಂದೇ ದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ರಕ್ಷಿತಾ ಮತ್ತು ಲಾವಣ್ಯ ತಮ್ಮ ಮನೆಯಲ್ಲಿ ಹೊಟ್ಟೆ ನೋವೆಂದು ನರಳಾಡಿ ಆಸ್ಪತ್ರೆಗೆ ದಾಖಲಾಗಿದ್ದರು. ರಕ್ಷಿತಾ ಮೊದಲಿಗೆ ಮೃತಪಟ್ಟರೆ ಲಾವಣ್ಯ ಬಳಿಕ ಸಾವನ್ನಪ್ಪಿದ್ದರು. ರಕ್ಷಿತಾ ಹಾಗೂ ಲಾವಣ್ಯ ಅವರಿಬ್ಬರೂ ಒಂದೇ ದಿನ ಒಂದೇ ಸಮಯಕ್ಕೆ ವಿಷಪ್ರಾಶನ ಮಾಡಿದರೇ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಕುರಿತು ಶುಕ್ರವಾರ ಧರ್ಮಸ್ಥಳ ಪೊಲೀಸ್ ಠಾಣೆ ಎಸ್.ಐ. ಅನಿಲ್ ಹಾಗೂ ಸಿಬಂದಿ ಮೃತರ ಮನೆಗೆ ಭೇಟಿ ನೀಡಿ ಒಂದಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಇಬ್ಬರು ಸೇವಾ ಪ್ರತಿನಿಧಿಗಳಾಗಿ ಕರ್ತವ್ಯದಲ್ಲಿದ್ದರು. ಇಬ್ಬರು ಉತ್ತಮ ಸೇವೆ ಸಲ್ಲಿಸುತ್ತಿದ್ದರು ಹಾಗೂ ಊರಿನಲ್ಲಿ ಇವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಈ ಪೈಕಿ ಲಾವಣ್ಯ ಮಾರ್ಚ್ ವರ್ಷಾಂತ್ಯಕ್ಕೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ರಕ್ಷಿತಾ ಸೇವೆಯಲ್ಲಿ ಮುಂದುವರಿದಿದ್ದರು. ಇವರ ಮಧ್ಯೆ ಯಾವುದಾದರು ಘಟನೆ ಸಂಭವಿಸಿ ಆಘಾತದಿಂದ ವಿಷಪ್ರಾಶನ ಮಾಡಿದ್ದಾರೆಯೇ ಎಂಬ ಅನುಮಾನ ಕಾಡಿದೆ. ಮನೆಯವರಿಗೂ ಯಾವುದೇ ಸ್ಪಷ್ಟತೆ ಇಲ್ಲ. ಹಾಗಾಗಿ ಎಫ್.ಎಸ್.ಎಲ್. ವರದಿಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದ್ದು, ಈ ಮಧ್ಯೆ ಬೇರೆ ಆಯಾಮಗಳಲ್ಲೂ ತನಿಖೆ ಮುಂದುವರಿಸಲಾಗಿದೆ ಎಂದು ದ.ಕ.ಜಿಲ್ಲಾ ಎಸ್.ಪಿ. ಅಮಟೆ ವಿಕ್ರಮ್ ತಿಳಿಸಿದ್ದಾರೆ.
ಮೃತ ರಕ್ಷಿತಾ ಹಾಗೂ ಲಾವಣ್ಯ ಅವರ ಮನೆಗೆ ಶನಿವಾರ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಈ ವೇಳೆ ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ, ಪಟ್ರಮೆ ಗ್ರಾ.ಪಂ. ಉಪಾಧ್ಯಕ್ಷರಾದ ಯತೀಶ್, ಗ್ರಾ.ಪಂ. ಸದಸ್ಯರಾದ ಮನೋಜ್ ಉಪಸ್ಥಿತರಿದ್ದರು.