ಬಂಟ್ವಾಳ, ಏ 9 (DaijiworldNews/MS): ಶನಿವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಬಿ.ಸಿ.ರೋಡ್ ಸಮೀಪದ ಮಿತ್ತಬೈಲಿನ ನಿವಾಸಿಯಾಗಿದ್ದ ಬಾಲಕನ ಮೃತದೇಹ ಶನಿವಾರ ತಡರಾತ್ರಿ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಪತ್ತೆಯಾಗಿದೆ.
ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ.ಸಿ.ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಅಝೀಂ (13) ಮೃತ ಬಾಲಕ. ಶನಿವಾರ ಮಧ್ಯಾಹ್ನ ಪಾಣೆಮಂಗಳೂರಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಬಾಲಕ ಅಲ್ಲಿ ತನ್ನ ಸ್ನೇಹಿತರೊಂದಿಗೆ ಇದ್ದುದನ್ನು ಸ್ಥಳೀಯರು ಗಮನಿಸಿದ್ದರು ಎನ್ನಲಾಗಿದೆ. ಆದರೆ ಬಳಿಕ ಬಾಲಕ ನಾಪತ್ತೆಯಾಗಿದ್ದ.
ಬಾಲಕನ ಕೈಯಲ್ಲಿದ್ದ ಮೊಬೈಲ್ ಗೆ ಪೋಷಕರು ಕರೆ ಮಾಡಿದ್ದು, ಬಾಲಕ ಕರೆ ಸ್ವೀಕರಿಸದ ಕಾರಣ ಆತಂಕಗೊಂಡ ಮನೆ ಮಂದಿ ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸರು ಬಾಲಕನ ಕೈಯಲ್ಲಿದ್ದ ಮೊಬೈಲ್ ಟ್ರೇಸ್ ಮಾಡಿದಾಗ ದೊರೆತ ಮಾಹಿತಿಯಂತೆ ಕಳ್ಳಿಗೆ ಗ್ರಾಮದ ಕೆರೆಯ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಸಮೀಪ ಬಾಲಕನ ವಸ್ತ್ರ, ಪಾದರಕ್ಷೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ತಡರಾತ್ರಿ ಪತ್ತೆಯಾಗಿದೆ.
ಮೃತದೇಹವನ್ನು ನೀರಿನಿಂದ ಮೇಲೆಕ್ಕೆತ್ತಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.