ಉಡುಪಿ, ಏ 08 (DaijiworldNews/MS): “ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲಾ ಏಳು ಮಂದಿ ಟಿಕೆಟ್ ಆಕಾಂಕ್ಷಿಗಳು ಕೂಡಾ ನನ್ನ ಜೊತೆ ಕೈ ಜೋಡಿಸಿ ಪಕ್ಷದ ದೃಷ್ಟಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ” ಎಂದು ಉಡುಪಿ ವಿಧಾನಸಬಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಉಡುಪಿ ವಿಧಾನಸಭಾ ಕ್ಷೇತ್ರದಿಂದ ಎಂಟು ಮಂದಿ ಆಕಾಂಕ್ಷಿಗಳು ಇದ್ದು, ಇದರಲ್ಲಿ ಪಕ್ಷ ನನಗೆ ಟಿಕೆಟ್ ನೀಡಿದೆ. ಆಕಾಂಕ್ಷಿಗಳಲ್ಲಿ ಬೇಸರ ಮೂಡುವುದು ಸಹಜ, ಕೃಷ್ಣ ಮೂರ್ತಿ ಆಚಾರ್ಯರಲ್ಲಿ ನಾನು ವೈಯುಕ್ತಿಕವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ಸ್ವಲ್ಪ ಶಾಂತ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ವಿನಂತಿ ಮಾಡಿದ್ದೇನೆ. ಅವರು ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತ, ಮುಂದಿನ ದಿನಗಳಲ್ಲಿ ಕೂಡಾ ಅವರು ನಮ್ಮ ಪಕ್ಷದೊಂದಿಗೆ ಇರಲಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮತ್ತು ಇತರ ಎಲ್ಲಾ ಆಕಾಂಕ್ಷಿಗಳ ಜೊತೆ ಕೂಡಾ ಸಭೆ ಮಾಡಿದ್ದೇವೆ. ಬ್ಲಾಕ್ ಅಧ್ಯಕ್ಷರು ನನಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಮಣಿಪಾಲದಲ್ಲಿ ನಾವು ಒಟ್ಟಿಗೆ ನಮ್ಮ ಕಾರ್ಯಕರ್ತರ ಸಭೆಯನ್ನು ಕೂಡಾ ನಡೆಸಿದ್ದೇವೆ” ಎಂದರು.
ಇದೇ ಸಂಧರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಮೊದ ಬಾರಿಗೆ ಉಡುಪಿ ಶ್ರೀ ಕೃಷ್ಣಮಠ ದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರಲ್ಲಿ ಹಾಗೆಯೇ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರಲ್ಲಿ ಆಶೀರ್ವಾದ ಪಡೆದರು.