ಉಡುಪಿ, ಏ 07 (DaijiworldNews/HR): ಕ್ರೈಸ್ತರ ಪವಿತ್ರ ದಿನವಾದ ಶುಭ ಶುಕ್ರವಾರ(ಗುಡ್ ಫ್ರೈ ಡೇ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಿದರು.
ಉಭಯ ಜಿಲ್ಲೆಗಳ ಎಲ್ಲ ಚರ್ಚ್ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಎಲ್ಲ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶಕ್ತಿನಗರದ ಮರಿಯಾಗಿರಿಯ ಮದರ್ ಆಫ್ ಗಾರ್ಡ್ ಚರ್ಚ್ನಲ್ಲಿ ಜರಗಿದ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಈ ಸಂದರ್ಭ ವಿಶೇಷ ಪ್ರಾರ್ಥನಾ ವಿಧಿಯಲ್ಲಿ ಪ್ರವಚನ ನೀಡುತ್ತಾ, ಪಾಪದ ವಿಮೋಚನೆಗೆ ಯಾವುದೇ ಔಷಧ ಇಲ್ಲ. ಯಾವುದೇ ವೈದ್ಯರು, ಮನಃಶಾಸ್ತ್ರಜ್ಞರಿಂದ ಪಾಪ ವಿಮೋಚನೆ ಮಾಡಲು ಸಾಧ್ಯವಿಲ್ಲ. ದೇವರ ಪುತ್ರನಾದ ಯೇಸು ಶಿಲುಬೆಗೆ ಏರಿ ರಕ್ತ ಹರಿಸಿಕೊಂಡು ಪಾಪಿಗಳ ಪಾಪಾಕ್ಕೆ ವಿಮೋಚನೆ ಕೊಟ್ಟರು. ಪಾಪಾದ ಗುಲಾಮರಾಗಿ ದೇವರನ್ನು ತಿರಸ್ಕಾರ ಮಾಡಿದಾಗ ಮನುಷ್ಯರು ನರಕದ ಹಾದಿಯನ್ನು ಹಿಡಿಯುತ್ತಾರೆ. ಯೇಸು ತನ್ನ ಬಲಿದಾನದ ಮೂಲಕ ಇಂತಹ ಪಾಪಿಗಳ ವಿಮೋಚನೆ ಕೊಟ್ಟರು ಎಂದರು.
ಇನ್ನು ಈ ಸಂದರ್ಭ ಚರ್ಚಿನ ಪ್ರಧಾನ ಧರ್ಮಗುರು ಫಾ. ಜೆರಾಲ್ಡ್ ಡಿಸೋಜ,ರೆಸಿಡೆಂಟ್ ಧರ್ಮಗುರುಗಳಾದ ಫಾ. ವಿನ್ಸೆಂಟ್ ವಿನೋದ್ ಸಲ್ಡಾನ, ಫಾ. ಪ್ರಮೋದ್ ಕ್ರಾಸ್ತಾ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದರು.
ಶುಭ ಶುಕ್ರವಾರ ಬಲಿಪೂಜೆ ಇಲ್ಲ:
ಕಥೋಲಿಕ್ ಚರ್ಚ್ಗಳಲ್ಲಿ ಶುಭ ಶುಕ್ರವಾರದಂದು ಯಾವುದೇ ಬಲಿಪೂಜೆಗಳು ಚರ್ಚ್ಗಳಲ್ಲಿ ನಡೆಯುವುದಿಲ್ಲ. ಇದರ ಬದಲು ಶುಭ ಶುಕ್ರವಾರದಂದು ಬೆಳಗ್ಗೆಯಿಂದ ಮಧ್ಯಾಹ್ನ 12ರ ತನಕ ಶಿಲುಬೆಯ ಹಾದಿಯ ಭಕ್ತಿಯ ಕಾರ್ಯಕ್ರಮಗಳು ಸಾಗಿತು. ಕೆಲವೊಂದು ಚರ್ಚ್ಗಳಲ್ಲಿ ಶಿಲುಬೆಯ ಹಾದಿಯ ಬಳಿಕ ಶಿಲುಬೆಗೆ ಏರಿದ ಯೇಸುವಿನ ಪ್ರತಿಮೆಯನ್ನು ಮೆರವಣಿಗೆ ಮಾಡುವ ಪರಿಪಾಟ ನಡೆಯಿತು. ಕೆಲವು ಚರ್ಚ್ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನು ಒಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸುವ ಕಾರ್ಯ ನಡೆಯಿತು. ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥನೆಗಳು ಸಾಗಿದವು. ಈ ಬಳಿಕ ಸಂಜೆ ಕರಾವಳಿಯ ಚರ್ಚ್ಗಳಲ್ಲಿ ನಡೆದ ಪ್ರಾರ್ಥನಾ ವಿಧಿಗಳಲ್ಲಿ ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಗಳಿಗೆಗಳ ಕಥನವನ್ನು ಓದಿದರು.ಈ ಬಳಿಕ ಪ್ರವಚನ ಸಾಗಿತು. ಸಮಾಜದ ನಾನಾ 10 ವಿಚಾರಗಳ ಕುರಿತು ವಿಶೇಷ ಪ್ರಾರ್ಥನೆ ನಡೆಯಿತು. ಇದರ ಜತೆಯಲ್ಲಿ ಶಿಲುಬೆಗೆ ನಮನ, ಶಿಲುಬೆಯ ಆರಾಧನೆಯ ಕಾರ್ಯಕ್ರಮಗಳು ನಡೆಯಿತು. ಈ ಕಾರ್ಯಕ್ರಮಗಳು ಸುದೀರ್ಘ ಸಮಯದ ವರೆಗೆ ನಡೆಯುವ ಜತೆಯಲ್ಲಿ ಈ ಬಳಿಕ ಭಕ್ತರು ಮೌನದಿಂದ ಮನೆಕಡೆಗೆ ತೆರಳಿದರು.
ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಯೇಸುವಿನ ಜಾಗರಣೆಯ ಬಲಿಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ನಡೆಸಿಕೊಡಲಿದ್ದಾರೆ. ಈಸ್ಟರ್ ಹಬ್ಬದ ಬಲಿಪೂಜೆಯನ್ನು ಬಂಟ್ವಾಳದ ವಾಮದಪದವಿನ ಚರ್ಚ್ನಲ್ಲಿ ನಡೆಸಲಿದ್ದಾರೆ.