ಪುತ್ತೂರು, ಏ 07 (DaijiworldNews/HR): ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿದ್ಯಾಮಾನದ ಹಿನ್ನೆಲೆಯಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಬಿಜೆಪಿ ವರಿಷ್ಠರು ಹೊಸ ಮುಖದ ಪ್ರಯೋಗಕ್ಕೆ ಮುಂದಾಗಿದ್ದಾರೆಂಬ ಸುದ್ದಿ ಸದ್ದು ಮಾಡುತ್ತಿದೆ.
ನಾಮಪತ್ರ ಸಲ್ಲಿಕೆಗೆ ಒಂದು ವಾರ ಇದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೆಲ ಹಾಲಿ ಶಾಸಕರಿಗೆ ಟಿಕೆಟ್ ಖಾತರಿ ಇಲ್ಲ ಎನ್ನುವ ಮಾಹಿತಿ ಇರುವ ಹಿನ್ನೆಲೆಯಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಮತ್ತೂಮ್ಮೆ ಅವಕಾಶ ಸಿಗುವ ಸಾಧ್ಯತೆ ಕ್ಷೀಣಿಸತೊಡಗಿದೆ.
ಇನ್ನು ಬಿಜೆಪಿ ಪಕ್ಷದೊಳಗಿನ ಭಿನ್ನ ಧ್ವನಿಯಿಂದ ಹಗ್ಗಜಗ್ಗಾಟದಲ್ಲಿ ಹೊಯ್ದಾಡುತ್ತಿದ್ದ ಹಾಲಿ ಶಾಸಕರು ಮೂರನೇ ಬಾರಿ ಸ್ಪರ್ಧಿಸಲು ಅವಕಾಶ ಕೋರಿದ್ದು, ಹೈಕಮಾಂಡ್ ಒಲವು ತೋರಿಲ್ಲ. ಈ ಬಗ್ಗೆ ಬಿಜೆಪಿ ವರಿಷ್ಠರೂ ಶಾಸಕರಿಗೆ ಬದಲಾವಣೆಯ ಸುಳಿವು ನೀಡಿದೆ ಎನ್ನಲಾಗಿದೆ.
ಕ್ಷೇತ್ರಕ್ಕೆ ಹೊರಗಿನಿಂದ ಅಭ್ಯರ್ಥಿಯನ್ನು ತರುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರು ಇಲ್ಲ. ಇತ್ತೀಚೆಗೆ ಪಕ್ಷದ ಹಿರಿಯರ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಹೊರಗಿನವರಿಗೆ ಅವಕಾಶ ನೀಡದಂತೆ ಒತ್ತಾಯಿಸುವ ನಿರ್ಣಯ ಕೈಗೊಂಡು ವರಿಷ್ಠರಿಗೆ ತಲುಪಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ತವರು ಕ್ಷೇತ್ರವೂ ಇದಾಗಿದ್ದು, ಅನಗತ್ಯ ವಿವಾದಕ್ಕೆಡೆ ಮಾಡದೆ ಹಾಗೂ ಬಣ ರಾಜಕೀಯಕ್ಕೂ ಅವಕಾಶ ಕೊಡದೆ ಸಂಘಟನ ಸಾಮರ್ಥ್ಯವಿರುವ ಹೊಸ ಮುಖವನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಸೂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಪುತ್ತೂರು ಕ್ಷೇತ್ರದಲ್ಲಿ ಕೆಲವು ಹೆಸರುಗಳು ಚಾಲ್ತಿಗೆ ಬಂದಿದ್ದು, ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ದ.ಕ. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ. ನಾರಾಯಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ ರಾವ್, ಆರ್ಎಸ್ಎಸ್ ಮುಂದಾಳು ಯತೀಶ್ ಆರುವಾರು ಅವರ ಹೆಸರು ಮುಂಚೂಣಿಯಲ್ಲಿವೆ.