ಕುಂದಾಪುರ, ಏ 07 (DaijiworldNews/MS): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಕಂಟೈನರ್, ಬೈಕ್ ಹಾಗೂ ನೀರಿನ ಟ್ಯಾಂಕರ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರರು ಇಬ್ಬರು ಸೇರಿದಂತೆ ನಾಲ್ಕು ಜನರು ಗಂಭೀರ ಗಾಯಗೊಂಡ ಘಟನೆ ಕುಂದಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು ಸಮೀಪದ ಜಾಲಾಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರರಾದ ಬೀಜಾಡಿ ನಿವಾಸಿ ಸಂಜೀವ ಮೊಗವೀರ ಹಾಗೂ ಅವರ ಪತ್ನಿ ರತ್ನಾ ಗಂಭೀರ ಗಾಯಗೊಂಡರೆ, ಲಾರಿಯಲ್ಲಿದ್ದ ಅನಾಜ್ ಹಾಗೂ ಶಾಜೀ ಗಾಯಗೊಂಡು ಆಸ್ಪತ್ರೆ ಸೇರಿದವರು.
ಘಟನೆಯ ವಿವರ: ದೀಪಕ್ ಎಂಬಾತ ಅನಾಜ್ ಹಾಗೂ ಶಾಜಿ ಎಂಬುವರನ್ನು ಕುಳ್ಳಿರಿಸಿಕೊಂಡು ಮಹಾರಾಷ್ಟ್ರದಿಂದ ಕರ್ಟನ್ ಬಾಕ್ಸ್ ಗಳನ್ನು ತುಂಬಿಕೊಂಡು ಕಂಟೈನರ್ ಲಾರಿಯನ್ನು ಚಲಾಯಿಸಿಕೊಂಡು ಕೇರಳ ಕಡೆಗೆ ಪ್ರಯಾಣಿಸುತ್ತಿದ್ದನು. ಹೆಮ್ಮಾಡಿಯ ಜಾಲಾಡಿ ಹಾಗೂ ತಲ್ಲೂರು ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಐ.ಆರ್.ಬಿ. ಕಂಪೆನಿಯ ನೀರಿನ ಟ್ಯಾಂಕರ್ ರಸ್ತೆ ನಡುವಿನ ಗಿಡಗಳಿಗೆ ನೀರು ಹಾಕುತ್ತಿತ್ತು. ಕಂಟೈನರ್ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದೇ ವೇಳೆ ಅದೇ ದಿಕ್ಕಿನಲ್ಲಿ ಸಂಜೀವ ಮೊಗವೀರ ವೀಗೋ ಬೈಕಿನಲ್ಲಿ ಪತ್ನಿ ರತ್ನಾ ಅವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದವರ ಮೇಲೆ ಕಂಟೈನರ್ ನ ಹಿಂಬದಿ ಬಡಿದಿದೆ. ಅಪಘಾತದಲ್ಲಿ ಬೈಕ್ ಸವಾರರ ತಲೆಗೆ ಪೆಟ್ಟಾಗಿದೆ. ಕಂಟೈನರ್ ನಲ್ಲಿ ಚಾಲಕ ಮೂವರಿದ್ದು ರಸ್ತೆಗೆ ಬಿದ್ದಿದ್ದು, ಚಾಲಕ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾನೆ.
ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.