ಉಡುಪಿ,ಮಾ 23(MSP): ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಮಾ.26 ರಂದು ಸಾರ್ವಜನಿಕವಾಗಿ ಮತ್ತೊಂದು ಪತ್ರಿ ನಾಮಪತ್ರವನ್ನು ಮಾ.26 ರಂದು ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಯ ಸಂದರ್ಭ ಘೋಷಿಸಿಕೊಂಡಿರುವ ಆದಾಯದ ವಿವರಗಳಂತೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ತಮ್ಮಲ್ಲಿ 10,48,72,668 (10 ಕೋಟಿಯ 48 ಲಕ್ಷದ 72 ಸಾವಿರದ 668) ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿರುವುದಗಿ ಘೋಷಿಸಿಕೊಂಡಿದ್ದಾರೆ. ಸಲ್ಲಿಕೆಯಾಗಿರುವ ಅಫಿಡವಿಟ್ಟಿನಲ್ಲಿ ತಮ್ಮಲ್ಲಿ ನಗದು, ಬ್ಯಾಂಕ್ ಬ್ಯಾಲೆನ್ಸ್, ಷೇರುಗಳಲ್ಲಿ ಹೂಡಿಕೆ, ಇನ್ಸೂರೆನ್ಸ್ ಪಾಲಿಸಿಗಳು, ವಾಹನಗಳು ಮತ್ತು ಚಿನ್ನಾಭರಣ ಸೇರಿ 7 ಕೋಟಿಯ 38 ಲಕ್ಷದ 72 ಸಾವಿರದ 668 ರೂಪಾಯಿಗಳ ಆಸ್ತಿ ಮೌಲ್ಯವಿರುವುದಾಗಿ ಘೋಷಿಸಿಕೊಂಡಿದ್ದಾರೆ.
2014ರಲ್ಲಿ ಯಾವುದೇ ಮನೆಯನ್ನು ಅವರು ಹೊಂದಿರಲಿಲ್ಲ. 2015ರಲ್ಲಿ ಬೆಂಗಳೂರಿನ ಚಿಕ್ಕಮಾರನಹಳ್ಳಿ ಬಳಿ 2 ಕೋಟಿಯ 7 ಲಕ್ಷದ 97 ಸಾವಿರದ 090 ರೂಪಾಯಿಗಳ ಮನೆಯನ್ನು ಕೊಂಡುಕೊಂಡಿದ್ದರು. ಈ ನಿವಾಸದ ಇಂದಿನ ಮಾರುಕಟ್ಟೆ ಬೆಲೆ 3 ಕೋಟಿಯಾಗಿದೆ. ಲೋಕಸಭೆ ಸದಸ್ಯೆಯಾಗಿ ತಾನು ಸಂಬಳ ಪಡೆದುಕೊಳ್ಳುತ್ತಿದ್ದು ಮತ್ತು ತಾವು ಹೂಡಿಕೆ ಮಾಡಿದ ಮೂಲಗಳಿಂದ ಆದಾಯ ಬರುತ್ತಿರುವುದಾಗಿ ಶೋಭಾ ಹೇಳಿಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ವಿರುದ್ಧ ಮೂರು ಕ್ರಿಮಿನಲ್ ಕೇಸುಗಳು ವಿಚಾರಣೆ ಹಂತದಲ್ಲಿವೆ.