ಉಡುಪಿ, ಏ.06 (DaijiworldNews/SM): ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯ ಬೆನ್ನಲ್ಲೇ ತ್ವರಿತ ಬೆಳವಣಿಗೆಯ ನಂತರ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಅವರು ಏಪ್ರಿಲ್ 06 ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕೃಷ್ಣಮೂರ್ತಿ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರಿಗೆ ಕಳುಹಿಸಿರುವ ಪತ್ರದಲ್ಲಿ ‘ನನ್ನ ವೈಯಕ್ತಿಕ ಕಾರಣಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಕೃಷ್ಣಮೂರ್ತಿ ಆಚಾರ್ಯ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ.
ಕೃಷ್ಣಮೂರ್ತಿ ಆಚಾರ್ಯ ಅವರು ಇಂದು ಸಂಜೆ ಹೋಟೆಲ್ ಮಥುರಾದಲ್ಲಿ ತಮ್ಮ ಬೆಂಬಲಿಗರೊಂದಿಗೆ ದೊಡ್ಡ ಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಕೃಷ್ಣಮೂರ್ತಿ ಆಚಾರ್ಯ, ''ಕಳೆದ ಎರಡು ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಅಂತಿಮ ಪಟ್ಟಿಯಲ್ಲೂ ನನ್ನ ಹೆಸರಿತ್ತು. ಅಪರಿಚಿತರಿಗೆ ಟಿಕೆಟ್ ನೀಡಿರುವುದು ನಾಚಿಕೆಗೇಡಿನ ಸಂಗತಿ. ಆಸ್ಕರ್ ಫೆರ್ನಾಂಡಿಸ್ ಇರುತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮೂರು ಬಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ಎರಡು ಬಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಿರಾಕರಿಸಲಾಗಿದೆ. ಆಸ್ಕರ್ ಫೆರ್ನಾಂಡಿಸ್ ನಿಧನದ ದಿನದಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಬೇರೆಯವರನ್ನು ಹೆಸರಿಸಿದ್ದಾರೆ. ಸ್ವಾರ್ಥಿ ಪ್ರಮೋದ್ ಮಧ್ವರಾಜ್ ಅವರೇ ಇದಕ್ಕೆಲ್ಲ ಕಾರಣರಾಗಿದ್ದರು ಎಂದು ಅವರು ದೂರಿದ್ದಾರೆ.