ಮಂಗಳೂರು, ಏ.05 (DaijiworldNews/SM): ನಗರದಾದ್ಯಂತ ಸಾರ್ವಜನಿಕರಿಗೆ ಬಲ್ಲೇರಿಯಾ ದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡು ವೀಸಾ ಕೂಡಿಸದೇ ವಂಚಿಸುತ್ತಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಬಿಜೆ ನ್ಯೂ ರೋಡ್ ನಿವಾಸಿ ಸುಧೀರ್ ರಾವ್ ವಿ ಆರ್(42) ಬಂಧಿತ ಆರೋಪಿ. ಈತ ಸಾರ್ವಜನಿಕರಿಂದ ಪಡೆದ ಹಣವನ್ನು ವಾಪಾಸ್ ಅವರಿಗೆ ನೀಡದೆ ಸುಮಾರು 30 ಕ್ಕೂ ಅಧಿಕ ಜನರಿಗೆ ಮೋಸ ಮಾಡಿದ ಆರೋಪಿಯಾಗಿದ್ದಾನೆ.
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮೋಸ ಮಾಡಿದ ಪ್ರಕರಣಗಳು ದಾಖಲಾಗಿದ್ದು ತಲೆಮರೆಸಿಕೊಂಡು ಓಡಾಡುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿತನ ಮೇಲೆ ಈ ಹಿಂದೆ ಕಾರು ಖರೀದಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೊಸೈಟಿಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದು ಸೊಸೈಟಿಗಳಿಗೆ ವಂಚಿಸಿರುವ ಬಗ್ಗೆ ಈ ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಹಾಗೂ ಈತನು ಸೊಸೈಟಿಗಳಿಂದ ಪಡೆದ ಸಾಲಕ್ಕೆ ಜಾಮೀನುದಾರರಾಗಿದ್ದವರು ನಷ್ಟಕ್ಕೊಳಗಾಗಿದ್ದಾರೆ.
ಬಲ್ಲೇರಿಯಾ ದೇಶದ ವೀಸಾ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡು ವೀಸಾ ಕೊಡಿಸದೇ ಹಾಗೂ ಸಾರ್ವಜನಿಕರಿಂದ ಪಡೆದ ಹಣವನ್ನು
ವಾಪಾಸ್ಸು ಅವರಿಗೆ ನೀಡದೆ ಮೋಸ ಮಾಡಿದ ಬಗ್ಗೆ ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ.
ಈತನ ವಿರುದ್ಧ ಈಗಾಗಲೇ 8 ಪ್ರಕರಣಗಳು ದಾಖಲಾಗಿದ್ದು, ಈತನು 50 ಲಕ್ಷಕ್ಕೂ ಮಿಕ್ಕಿ ಹಣವನ್ನು ಪಡೆದು ಸಾರ್ವಜನಿಕರಿಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿರುತ್ತದೆ. ಈತನು ಇನ್ನೂ ಹಲವಾರು ಮಂದಿಗೆ ವಿವಿಧ ರೀತಿಯಲ್ಲಿ ವಂಚನೆ ಮಾಡಿರುವ ಸಾಧ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.