ಸುಬ್ರಹ್ಮಣ್ಯ, ಏ.05 (DaijiworldNews/SM): ಪವಿತ್ರ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಮಣ್ಯ ಸುತ್ತಲ ಕುಮಾರ ಪರ್ವತದಿಂದ ಹರಿದು ಬರುವ ನೀರು ಇಲ್ಲಿಯ ಬಾಬುರಾಯನ ಗುಂಡಿ ಎಂಬಲ್ಲಿ ಮಲಿನಗೊಂಡಿರುವ ನೀರಿನಿಂದಾಗಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವ ದೃಶ್ಯ ಕಂಡುಬಂದಿದೆ.
ಆದಿಸುಬ್ರಮಣ್ಯದಿಂದ ದರ್ಪಣ ತೀರ್ಥ ಸಮೀಪದ ಬಾಬುರಾಯನಗುಂಡಿ ಎಂಬಲ್ಲಿ ಈ ಘಟನೆ ನಡೆದಿದೆ. ಇದೇ ನೀರು ಕುಕ್ಕೆ ಸುಬ್ರಮಣ್ಯದ ಕುಮಾರಧಾರ ನದಿಗೆ ಸೇರುತ್ತದೆ.
ಹೋಟೆಲು ಹಾಗೂ ಲಾಡ್ಜ್ ಗಳಿಂದ ಬರುವಂತಹ ಈ ಕಲುಷಿತ ನೀರಿನಿಂದಾಗಿ ಎಲ್ಲೆಂದರಲ್ಲಿ ಬಿಸಾಡಿರುವಂತಹ ಕಸದ ರಾಶಿಗಳು ಕೇವಲ ಜಲಚರಗಳಿಗೆ ಮಾತ್ರವಲ್ಲದೆ ಇದರಿಂದಾಗಿ ಹೊರಬರುವ ದುರ್ವಾಸನೆ ಇಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಭಾರಿ ಸಮಸ್ಯೆ ಉಂಟಾಗುತ್ತಿದೆ.
ಹೋಟೆಲ್ ಗಳಿಂದ ಹಾಗೂ ಲಾಡ್ಜ್ ಗಳಿಂದ ಬರುವಂತಹ ವೇಸ್ಟ್ ನೀರು ಪೈಪಿನ ಮೂಲಕ ಹಾದು ಹೋಗಿ ಡ್ರೈನೇಜ್ ಚೇಂಬರನ್ನು ಸೇರಬೇಕಿದ್ದು ಆದರೆ ಇಲ್ಲಿಯ ಪೈಪ್ ಲೈನ್ ಗಳು ಒಡೆದು ನೇರವಾಗಿ ನದಿಯ ನೀರನ್ನು ಸೇರಿರುವುದು ಹಾಗೂ ಡ್ರೈನೇಜ್ ಚೇಂಬರುಗಳಲ್ಲಿ ಲೀಕೇಜ್ ಕಂಡುಬರುತ್ತಿದ್ದು ನೀರು ಮಲಿನಗೊಂಡು ನೀರಿನಲ್ಲಿ ಇರುವಂತಹ ಜಲಚರಗಳ ಮಾರಣಹೋಮ ನಡೆದಿರುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಪುಣ್ಯ ನದಿಯನ್ನು ಇನ್ನಾದರೂ ಕಾಪಾಡಬೇಕೆಂದು ಜನರ ಆಗ್ರಹವಾಗಿದೆ.