ಬಂಟ್ವಾಳ, ಮಾ 22(SM): ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಖಾಸಗಿ ಶಾಲೆಯೊಂದು ಪೋಷಕರ ಅನುಮತಿಯೊಂದಿಗೆ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನೊಂದಾಯಿಸದೇ ಇರುವ ಘಟನೆ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಲ್ಲಿಪಾದೆಯ ಖಾಸಗಿ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಈ ವಿದ್ಯಮಾನ ನಡೆದಿದ್ದು, ಘಟನೆಯ ಗಂಭೀರತೆಯನ್ನು ತಡವಾಗಿ ಅರಿತುಕೊಂಡ ಪೋಷಕರು ಇದೀಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಅಲ್ಲಿಪಾದೆಯ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ನಾಲ್ವರು ಮಕ್ಕಳು ಕಲಿಕೆಯಲ್ಲಿ ಹಿಂದುಳಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕ ವರ್ಗ ಈ ನಿರ್ಧಾರಕ್ಕೆ ಬಂದಿದೆ ಎಂಬ ಆರೋಪ ಕೇಳಿ ಬಂದಿದೆ. 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲೇ ಈ ಬಗ್ಗೆ ಶಿಕ್ಷಕರು ಮಕ್ಕಳ ಪೋಷಕರ ಜೊತೆ ಚರ್ಚಿಸಿದ್ದರು. 9ನೇ ತರಗತಿಯಲ್ಲಿ ಅನುತ್ತೀರ್ಣಗೊಳಿಸದೇ 10ನೇ ತರಗತಿಯಲ್ಲಿ ಎರಡು ವರ್ಷ ಕಲಿಯಬೇಕೆಂದು ಶಿಕ್ಷಕರು ಮಕ್ಕಳ ಹೆತ್ತವರಿಗೆ ತಿಳಿಸಿದ್ದರು ಎನ್ನಲಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯ ಹಾಲ್ ಟಿಕೆಟ್ ಗೆ ನೊಂದಾವಣೆ ಮಾಡಬೇಕಾಗಿದ್ದ ಸಂದರ್ಭ ಕಳೆದ ಅಕ್ಟೋಬರ್ ನಲ್ಲಿ ಈ ನಾಲ್ಕು ವಿದ್ಯಾರ್ಥಿಗಳ ಹೆಸರನ್ನು ಹೆತ್ತವರ ಅನುಮತಿಯೊಂದಿಗೆ ದಾಖಲಿಸದೆ, ಇತರ 29 ಮಂದಿ ವಿದ್ಯಾರ್ಥಿಗಳ ಹೆಸರು ನೊಂದಾಯಿಸಿದ್ದರು. ಇದೀಗ 2018-19ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು 21 ರಿಂದ ಆರಂಭಗೊಂಡಿವೆ. ಕನ್ನಡ ಪರೀಕ್ಷೆ ಮುಗಿದಿದೆ. ಇಂತಹ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದಿರುವ ಈ ವಿದ್ಯಮಾನ ಬೆಳಕಿಗೆ ಬಂದಿದ್ದು, ನಾಲ್ವರು ವಿದ್ಯಾರ್ಥಿಗಳ ಒಂದು ವರ್ಷದ ಅವಧಿ ವ್ಯರ್ಥವಾಗುವ ಹಂತಕ್ಕೆ ತಲುಪಿದೆ.
ಶಾಲೆಯ ಫಲಿತಾಂಶದಲ್ಲಿ ಪ್ರಗತಿ ಸಾಧಿಸಲು, ಈ ನಾಲ್ವರು ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಕೈ ಬಿಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಮಾರ್ಚ್ 22ರ ಶುಕ್ರವಾರ ಬೆಳಿಗ್ಗೆ ವಿಷಯ ತಿಳಿಯುತ್ತಲೇ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಶಾಲೆಗೆ ದೌಡಾಯಿಸಿದ್ದಾರೆ. ಶಾಲಾ ಶಿಕ್ಷಕರು ಮತ್ತು ಮಕ್ಕಳ ಪೋಷಕರಿಂದ ಮಾಹಿತಿ ಸಂಗ್ರಹಿಸಿದ್ದು, ಮುಂದಿನ 24 ಗಂಟೆಯ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.