ಉಡುಪಿ, ಏ 05 (DaijiworldNews/MS): ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರು ನಾಟ್ಯ ಶಾಸ್ತ್ರದಲ್ಲಿ 8ನೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಾಟ್ಯಶಾಸ್ತ್ರದಲ್ಲಿ ವಿವರಿಸಿದ 108 ಕರಣಗಳ ಭಂಗಿಗಳನ್ನು 3 ನಿಮಿಷ 29 ಸೆಕೆಂಡ್ ನಲ್ಲಿ ಪ್ರಸ್ತುತಪಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾದರು.
ಕಾಲು, ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವ ಕರಣಗಳ ಮೂಲ ಎನ್ನಲಾಗುತ್ತದೆ. ಪ್ರತೀ ಕರಣವನ್ನು ಚಲನೆಯಂತೆ ಅಭ್ಯಾಸ ಮಾಡಲಾಗಿದ್ದು, ಇದು ಕೇವಲ ಭಂಗಿಯಲ್ಲ. 108 ನಾಟ್ಯಶಾಸ್ತ್ರದಲ್ಲಿ ಇದನ್ನು ಕ್ರೋಢಿಕರಿಸಲಾಗಿದೆ ಎಂದು ತನುಶ್ರೀ ಅವರ ಗುರು ಶ್ರೀರಾಮಕೃಷ್ಣ ಕೊಡಂಚ ತಿಳಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ಗೌರವ್ ಮಿತ್ತಲ್ ಅವರು ದಾಖಲೆಯ ಪ್ರಮಾಣಪತ್ರವನ್ನು ತನುಶ್ರೀ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಸೈಂಟ್ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅವರು 8ನೇ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದು, ಒಂದು ಗಿನ್ನೆಸ್ ರೆಕಾರ್ಡ್, 7 ಗೋಲ್ಡನ್ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಎಂಟನೇ ದಾಖಲೆಯ ಅಂಗವಾಗಿ ಎಂಟು ಮಂದಿ ನೃತ್ಯ, ಮತ್ತು ಹಿಮ್ಮೇಳದ ಗುರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ರಾಜ್ಯಾಧ್ಯಕ್ಷರಾದ ಸಿ ರಮೇಶ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಯಕರ ಶೆಟ್ಟಿ ಇಂದ್ರಾಳಿ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾದ ಮಾಧವ ಬನ್ನಂಜೆ, ಕಾರ್ಯದರ್ಶಿ ಆನಂದ್ ಪೂಜಾರಿ, ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ನವೀನ್ ಸಾಲಿಯಾನ್, ಉಡುಪಿ ಜಿಲ್ಲಾ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾದ ಶ್ರಿಕಾಂತ್ ಶೆಣೈ, ಗುರುಗಳಾದ ರಾಮಕೃಷ್ಣ ಕೊಡಂಚ, ಅಭಿನಯ ಕಲಾವಿದರು ಇದರ ಮಾರ್ಗದರ್ಶಕರಾದ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ತನುಶ್ರೀಯ ತಂದೆ ತಾಯಿಯಾದ ಉದಯ್ ಮತ್ತು ಸಂಧ್ಯಾ, ಸಹೋದರಿ ರಿತುಶ್ರಿ ಮತ್ತು ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.