ಮಂಗಳೂರು, ಏ 04 (DaijiworldNews/HR): ರೈಲು ಹಳಿ ಮೇಲೆ ಮರ ಬಿದ್ದದ್ದನ್ನು ಗಮನಿಸಿದ ಮಹಿಳೆಯೊಬ್ಬರು ಕೆಂಪುಬಟ್ಟೆ ಯನ್ನು ಕೈಯಲ್ಲಿ ಪ್ರದರ್ಶಿಸಿ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುವ ಘಟನೆ ಪಡೀಲ್ -ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪ ಮಂದಾರದಲ್ಲಿ ನಡೆದಿದೆ.
ಚಂದ್ರಾವತಿ (70) ಅವರು ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿ ಹಲವಾರು ಪ್ರಯಾಣಿಕರ ಪ್ರಾಣವನ್ನು ಉಳಿಸಿದ ಮಹಿಳೆ.
ಮಾ. 21ರಂದು ಮಧ್ಯಾಹ್ನ ಸುಮಾರು 2.10ರ ಸುಮಾರಿಗೆ ರೈಲು ಹಳಿಗೆ ಮರ ಬಿದ್ದಿದ್ದು, ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನು ತಕ್ಷಣವೇ ಗಮನಿಸಿದ ಚಂದ್ರಾವತಿ ಅವರು ಮನೆಯಲ್ಲಿದ್ದ ಕೆಂಪು ವಸ್ತ್ರವನ್ನು ತಂದು ರೈಲು ಬರುವ ಸಮಯಕ್ಕೆ ಪ್ರದರ್ಶಿಸಿ ಲೋಕೋಪೈಲೆಟ್ ಅವರ ಗಮನ ಸೆಳೆದಿದ್ದಾರೆ.
ಇನ್ನು ಅಪಾಯ ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ್ದು, ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಕೆಲವರು ಸೇರಿ ಮರ ತೆರವು ಮಾಡಿದ್ದಾರೆ.
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿದ ಅವರು, ನಾನು ಊಟ ಮಾಡಿ ಮನೆಯ ಅಂಗಳದಲ್ಲಿದ್ದೆ. ನನ್ನ ಅಕ್ಕ ಮನೆಯಲ್ಲಿ ಮಲಗಿದ್ದರು. ಅದೇ ವೇಳೆ ಮನೆ ಎದುರಿನ ರೈಲು ಹಳಿಗೆ ಏನೋ ಬಿದ್ದ ಶಬ್ದ ಕೇಳಿತು. ಬಂದು ನೋಡಿದಾಗ ದೊಡ್ಡ ಮರ ಹಳಿಯಲ್ಲಿತ್ತು. ಅದೇ ವೇಳೆಗೆ ಮುಂಬಯಿ ರೈಲು ಸಂಚರಿಸುವ ಬಗ್ಗೆ ಗೊತ್ತಿತ್ತು. ಏನು ಮಾಡಬೇಕು ಎಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಯಾರಿಗಾದರೂ ಕರೆ ಮಾಡಿ ತಿಳಿಸುವ ಎಂದು ಮನೆಗೆ ಬಂದೆ. ಆಗ ರೈಲಿನ ಹಾರ್ನ್ ಕೇಳಿಸಿತು. ಆಗ ದೇವರ ದಯೆಯಿಂದ ಅಲ್ಲೇ ಕೆಂಪು ಬಟ್ಟೆ ಕಂಡಿತು. ನನಗೆ ಹೃದಯದ ಆಪರೇಷನ್ ಆಗಿದ್ದರು ಅದನ್ನು ಲೆಕ್ಕಿಸದೆ ಕೆಂಪು ಬಟ್ಟೆ ಹಿಡಿದು ಹಳಿಯ ಬಳಿಗೆ ಓಡಿದೆ ಎಂದರು.
ಕೆಲವು ವರ್ಷಗಳ ಹಿಂದೆ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದ ಕೃಷಿಕ ಪ್ರಾಂಕ್ಲಿನ್ ಫೆರ್ನಾಂಡಿಸ್ ಅವರು ರಥಪುಷ್ಪದ ಹೂವನ್ನು ಕೈಯಲ್ಲಿ ಹಿಡಿದು ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.