ಪುತ್ತೂರು, ಏ 04 (DaijiworldNews/HR): ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಕೆಳಭಾಗದಲ್ಲಿ ವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಮತ್ತೊಂದು ದೊಡ್ಡದಾದ ಪಾಣಿಪೀಠ ಕಂಡು ಬಂದಿದ್ದು ಅಚ್ಚರಿಗೆ ಕಾರಣವಾಗಿದೆ.
ಪಾಣಿಪೀಠ
ವರುಣ ದೇವರ ವಿಗ್ರಹ
ದೇವಸ್ಥಾನದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಪುನರ್ ನಿರ್ಮಾಣದ ಕೆಲಸ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಕೆರೆಯ ಮಧ್ಯ ಭಾಗದ ಕಟ್ಟೆಯ ಸುತ್ತ ಕಾಫರ್ ಡ್ರಾಜ್ ಮಾಡಿ ಒಳಗಿನ ನೀರನ್ನು ಹೊರತೆಗೆದಾಗ ಶ್ರೀವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಬೃಹತ್ ಪಾಣಿಪೀಠ ಕಂಡುಬಂದಿದ್ದು, ಅದರ ಎದುರೇ ತಾಮ್ರದ ಸಣ್ಣ ಕರಡಿಗೆ ಕೂಡ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ದೇವಸ್ಥಾನದ ಪುಷ್ಕರಣಿ ಮಧ್ಯೆ ಇರುವ ಕಟ್ಟೆಯ ಕೆಳಭಾಗದ ವರುಣ ದೇವರ ವಿಗ್ರಹದ ಬಳಿ ಭೂಗರ್ಭದಲ್ಲಿ ನೀಲಿ-ಬಿಳಿ ಮಿಶ್ರಿತ ಹುಡಿ ಮಣ್ಣಿನೊಂದಿಗೆ ಅಂಟಿಕೊಂಡಿದ್ದ ವರುಣ ದೇವರ ವಿಗ್ರಹದ ಪಾಣಿಪೀಠ ಕಂಡುಬಂದಿತ್ತು. ಇದೀಗ ಅದರ ಕೆಳಗೇ ಬೃಹತ್ ಪಾಣಿಪೀಠ ಪತ್ತೆಯಾಗಿದೆ.
ಇನ್ನು ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲೂ ದೇವಳದ ಒಳಾಂಗಣದಲ್ಲಿ ಶಿಲಾ ಶಾಸನಗಳು, ಕೆತ್ತನೆ ಶಿಲ್ಪಗಳು, ಗರ್ಭಗುಡಿಯಲ್ಲಿ ಪ್ರಭಾವಳಿ, ರಾಜರ ಕಾಲದ ನಾಣ್ಯಗಳು ಪತ್ತೆಯಾಗಿದ್ದವು.
12ನೇ ಶತಮಾನದಲ್ಲಿ ಮಹಾಲಿಂಗೇಶ್ವರ ದೇವರ ಪುಷ್ಕರಣಿ ರಚನೆಯಾಗಿದೆ ಎಂದು ಇತಿಹಾಸ ಹೇಳುತ್ತಿದ್ದು, ಅದರಂತೆ ಅದರ ಕಟ್ಟೆಯ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ ಈ ಸಂದರ್ಭ ಆರಂಭದಲ್ಲಿ ವರುಣ ದೇವರ ವಿಗ್ರಹ ಪಾಣಿಪೀಠ ಗೋಚರ ಆಗಿತ್ತು ಬಳಿಕ ನೀಲಿ ಬಿಳಿ ಮಿಶ್ರಿತ ಹುಡಿ ಬೆಳಕಿಗೆ ಬಂದಿತ್ತು ಇದೀಗ ಒಂದು ಪಾಣಿಪೀಠದ ಅಡಿಯಲ್ಲಿ ಮತ್ತೊಂದು ದೊಡ್ಡ ಪಾಣಿಪೀಠ ಇರುವುದು ಬೆಳಕಿಗೆ ಬಂದಿದೆ.
ಮಗಾಲಿಂಗೇಶ್ವರ ದೇವಾಸ್ಥಾನದಲ್ಲಿ ಪ್ರತಿ ವರ್ಷ ಏಪ್ರಿಲ್ 10ರಿಂದ 18ರ ವರೆಗೆ ಜಾತ್ರಾ ಮಹೋತ್ಸವ ಜರಗುತ್ತಿದ್ದು, ಈ ಬಾರಿಯ ಜಾತ್ರೆಯ ಸಮಯಕ್ಕೆ ಪುಷ್ಕರಣಿ ಕೆಲಸ ಪೂರ್ಣಗೊಳಿಸುವ ಉದ್ದೇಶದಿಂದ ಪುನರ್ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ.