ಮಂಗಳೂರು, ಏ.03 (DaijiworldNews/SM): ವಿಚಾರವಾದಿ ಪ್ರೋ. ನರೇಂದ್ರ ನಾಯಕ್ ಅವರಿಗೆ ಪೊಲೀಸ್ ಭದ್ರತೆ ಮಿಂದುವರೆಸಬೇಕೆಂದು ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ನರೇಂದ್ರ ನಾಯಕ್ ಅವರು ಅಖಿಲ ಭಾರತ ವಿಚಾರವಾದಿ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರು. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರು. ಮೌಢ್ಯಾಚರಣೆಗಳನ್ನು ಬಯಲಿಗೆಳೆಯುವುದು, ವೈಜ್ಞಾನಿಕ ಮನೋಭಾವ ಮೂಡಿಸುವುದರಲ್ಲಿ ಕಳೆದ ಐದು ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸಂವಿಧಾನದ ಉದ್ದೇಶಗಳಾದ ವೈಜ್ಞಾನಿಕ ಮನೋಭಾವ, ಜಾತ್ಯಾತೀತ ತಿಳುವಳಿಕೆಗಳನ್ನು ಸಮಾಜದಲ್ಲಿ ಮೂಡಿಸುವ ಕಾರಣಕ್ಕೆ ಪ್ರತಿಗಾಮಿ ಶಕ್ತಿಗಳಿಂದ ಹಲವು ಬಾರಿ ದಾಳಿಗಳಿಗೆ ಗುರಿಯಾಗಿದ್ದಾರೆ.
ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಕಾರಣಕ್ಕೆ ಬಲಪಂಥೀಯ ಶಕ್ತಿಗಳಿಂದ ಕೊಲೆಗೀಡಾದ ನರೇಂದ್ರ ದಾಬೋಳ್ಕರ್, ಗೋವಿಂದ ಪನ್ಸಾರೆ ಪ್ರೊ. ನರೇಂದ್ರ ನಾಯಕ್ ರ ಸಹವರ್ತಿಗಳಾಗಿದ್ದರು.
ಈ ಹಿನ್ನೆಲೆಯಲ್ಲಿ ನರೇಂದ್ರ ನಾಯಕ್ ಅವರಿಗೆ ಭದ್ರತೆ ಮುಂದುವರೆಸಬೇಕೆಂದು ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಎಂ, ದೇವದಾಸ್, ರಘು ಎಕ್ಕಾರ್ , ಸಿಪಿಐ ಎಂ ನ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐನ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಡಿವೈಎಫ್ಐ ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಸಾಮರಸ್ಯ ಬಳಗದ ಮಂಜುಳಾ ನಾಯಕ್, ವಿನಾಯಕ ಬಾಳಿಗ ಸಹೋದರಿ ಅನುರಾಧ ಬಾಳಿಗಾ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಸಮರ್ಥ್ ಭಟ್, ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಶಾಹಿದ್ ಅಫ್ರೀದ್, ಪ್ರಮಿಳಾ ದೇವಾಡಿಗ, ಅಸುಂತ ಡಿಸೋಜ, ಎಐವೈಎಫ್ ನ ಸುರೇಶ್, ಪ್ರಥಮ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.