ಮಂಗಳೂರು, ಏ 02 (DaijiworldNews/SM): ನಗರದ ಸ್ಟೇಟ್ ಬ್ಯಾಂಕ್ನ ಬಸ್ ನಿಲ್ದಾಣವನ್ನು ಮಹಾನಗರ ಪಾಲಿಕೆಯ 1 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಮುಂದೆ ಸುಗಮ ಸಂಚಾರ ಸುವ್ಯವಸ್ಥೆಗಾಗಿ ಸಿಟಿ, ಸರ್ವಿಸ್, ಕೆಎಸ್ಆರ್ಟಿಸಿ ಬಸ್ಗಳಿಗೆ ಒಂದೇ ಕಡೆ ಬಸ್ ನಿರ್ಮಿಸಲಾಗಿದೆ. ಏಪ್ರಿಲ್ 1ರಿಂದಲೇ ಈ ಪದ್ಧತಿಯನ್ನು ಅನುಷ್ಠಾನ ಮಾಡಲಾಗಿದೆ.
ಬಸ್ ತಂಗುದಾಣ ಅಭಿವೃದ್ದಿಪಡಿಸಲಾಗಿದ್ದು, ಹೊಸ ಛಾವಣಿ ಅಳವಡಿಸಲಾಗಿದೆ. ಬಸ್ ನಿಲ್ದಾಣಕ್ಕೆ ಕಾಂಕ್ರೀಟ್ ಕಾಮಗಾರಿ, ಶೌಚಲಯ ದುರಸ್ತಿ, ವಿದ್ಯುತ್ ವ್ಯವಸ್ಥೆ ಸಹಿತ ಮೂಲ ಸೌಂಕರ್ಯ ಕಲ್ಪಿಸಿದ್ದು, 11 ಬಸ್ ಬೇ ನಿರ್ಮಿಸಲಾಗಿದೆ. 1 ಬಸ್ ಬೇ ಕೆಸ್ಸಾರ್ಟಿಸಿ, 4 ಬಸ್ ಬೇ ಸಿಟಿ ಬಸ್ ಗೆ, 6 ಬಸ್ ಬೇ ಸರ್ವೀಸ್ ಬಸ್ ಗೆ ನಿಗದಿಪಡಿಸಲಾಗಿದೆ.
ಸ್ಟೇಟ್ ಬ್ಯಾಂಕ್ ನ ಸಿಟಿ ಬಸ್ ನಿಲ್ದಾಣದ ಭಾಗದಲ್ಲಿ ಸಿಟಿ ಬಸ್ ಗಳ ಸಂಚಾರ ಮತ್ತು ನಿಲುಗಡೆಯಿಂದ ಟ್ರಾಫಿಕ್ ಸಮಸ್ಯೆಯೂ ಆಗುತ್ತಿತ್ತು. ಜೊತೆಗೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ನಿಲ್ಲಲು ಸರಿಯಾದ ವ್ಯವಸ್ಥೆಯಿರಲಿಲ್ಲ, ಸರ್ವೀಸ್ ಬಸ್ ನಿಲ್ದಾಣದಲ್ಲಿರುವ ಶೌಚಲಯವನ್ನೇ ಬಳಕೆ ಮಾಡಬೇಕಾದ ಅನಿವಾರ್ಯತೆ ಇತ್ತು. ಸಂಚಾರ ದಟ್ಟಣೆ ಮತ್ತು ಮೂಲಭೂತ ಸೌಂಕರ್ಯಗಳ ದೃಷ್ಠಿಯಿಂದ ಸರ್ವೀಸ್ ಬಸ್ ನಿಲ್ದಾಣದಲ್ಲೇ ಎಲ್ಲಾ ಬಸ್ ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಸಿಟಿ ಬಸ್ ನಿಲ್ದಾಣವನ್ನು ಏಕಾಏಕಿ ಶಿಫ್ಟ್ ಮಾಡಿದ ಪರಿಣಾಮ ಮೊದಲ ದಿನ ಪ್ರಯಾಣಿಕರು ಪರದಾಡುವಂತಾಯಿತು. ಬಳಿಕ ಪೊಲೀಸರು ಮತ್ತು ಬಸ್ ಸಿಬ್ಬಂದಿಗಳು ಬಸ್ ಬೇ ಇರುವ ಕಡೆಗೆ ತೆರಳುವಂತೆ ಸೂಚಿಸಿದರು. ಒಟ್ಟಿನಲ್ಲಿ ಸಿಟಿ ಬಸ್ ನಿಲ್ದಾಣ ಮತ್ತು ಸರ್ವೀಸ್ ಬಸ್ ನಿಲ್ದಾಣ ಮತ್ತು ಕೆಲವೊಂದು ಕೆಎಸ್ ಆರ್ ಟಿಸಿ ಬಸ್ಸುಗಳು ಕೂಡ ಒಂದೇ ಭಾಗದಲ್ಲಿ ಇರುವುದ್ದರಿಂದ ಜನರಿಗೂ ಅನುಕೂಲವಾಗುವ ಜೊತೆಗೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉಪಯೋಗವಾಗಲಿದೆ ಎಂಬುದು ಸದ್ಯದ ಲೆಕ್ಕಾಚಾರ.