ಕಾಪು, ಏ 02 (DaijiworldNews/SM): ಉಚ್ಚಿಲದ ಅಪಘಾತ ವಲಯ ಎಂದೇ ಕುಖ್ಯಾತಿ ಪಡೆದಿದ್ದ ಪಣಿಯೂರು- ಹೆದ್ದಾರಿ 66ರ ತಿರುವಿಗೆ ರವಿವಾರ ಸಂಜೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಸಾರ್ವಜನಿಕರು ನಿಟ್ಟಿಸಿರು ಬಿಡುವಂತಾಗಿದೆ.
ಇಲ್ಲಿಯ ಅವೈಜ್ಞಾನಿಕ ತಿರುವಿನಲ್ಲಿ ಮೂರು ವರ್ಷದ ಅವಧಿಯಲ್ಲಿ ಸರಿಸುಮಾರು 300ಕ್ಕೂ ಹೆಚ್ಚುಅಪಘಾತಗಳು ಸಂಭವಿಸಿದೆ. ಇಲ್ಲಿ ಹಲವಾರು ಪ್ರಾಣತೆತ್ತಿದ್ದು, ಹೆಚ್ಚಿನವರು ಕೈ ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಿ, ಈ ಅವಜ್ಞಾನಿಕ ತಿರುವನ್ನು ಬಂದ್ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.
ಹೆದ್ದಾರಿ ಇಲಾಖೆ ಕಿವಿ ಕೇಳದಂತಾಗಿತ್ತು. ಅಂತೂ ಭಾನುವಾರ ಸಂಜೆ ಹೆದ್ದಾರಿ ಇಲಾಖಾ ಗುತ್ತಿಗೆದಾರ ನವಯುಗ ಕಂಪನಿಯವರು ಉಚ್ಚಿಲದ ಅವೈಜ್ಞಾನಿಕ ತಿರುವನ್ನು ಕಾಂಕ್ರೀಟ್ ಸ್ಲಾಬ್ ಅಳವಡಿಸುವ ಮೂಲಕ ತಾರ್ಕಿಕ ಅಂತ್ಯ ಹಾಡಿದ್ದಾರೆ. ಉಚ್ಚಿಲದಲ್ಲಿ ಸರ್ವಿಸ್ ರಸ್ತೆ ಸಂಪೂರ್ಣಗೊಂಡಿದ್ದರೂ, ಸರ್ವೀಸ್ ರಸ್ತೆಯಲ್ಲಿ ಹೆದ್ದಾರಿಯ ಪೂರ್ವ ಅಥವಾ ಪಶ್ಚಿ ಭಾಗಕ್ಕೆ ಸಾಗಲು ಉತ್ತರದಲ್ಲಿ ಕೊಪ್ಪಲಂಗಡಿ ಮತ್ತು ದಕ್ಷಿಣದಲ್ಲಿ ಎರ್ಮಾಳಿಗೆ ಸಾಗುವ ಪರಿಸ್ಥಿತಿ ಇದೆ. ಇದರಿಂದಾಗಿ ವಾಹನ ಸವಾರರು ವಿರುದ್ಧ ದಿಕ್ಕಿನಿಂದ ಸಾಗುವುದರಿಂದ ಮತ್ತೊಂದು ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಆದಷ್ಟು ಶೀಘ್ರವಾಗಿ ಉತ್ತರ ದಿಕ್ಕಿನಲ್ಲಿ ಹೆದ್ದಾರಿ ಡಿವೈಡರ್ ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹವಾಗಿದೆ.