ಮಂಗಳೂರು, ಏ 02 (DaijiworldNews/MS): ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾಚ್೯ 30 ರಂದು ದೈವಾರಾಧನೆ ನಡೆಯುತ್ತಿದ್ದ ಸ್ಥಳದಲ್ಲಿ ದೈವ ನರ್ತನ ನಡೆಯುತ್ತಿರುವಾಗಲೇ ದೈವ ನರ್ತಕ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಒಂದು ಲಕ್ಷ ರೂ. ಆರ್ಥಿಕ ನೆರವು ಘೋಷಣೆ ಮಾಡಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಭೆಯಲ್ಲಿ ದೈವ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇಹಲೋಕ ತ್ಯಜಿಸಿದ ಕಾಂತು ಅಜಿಲರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ದೈವಾರಾಧನೆ ಕುರಿತು ಅಪಾರ ಜ್ಞಾನ ಹೊಂದಿದ್ದ ಕಾಂತು ಅಜಿಲರು ಹಲವರಿಗೆ ಸಂಶೋಧನೆ ಕುರಿತು ಮಾಹಿತಿ ನೀಡುತ್ತಿದ್ದರು. ಎಡಮಂಗಲದ ಪ್ರಮುಖ ದೈವಸ್ಥಾನದಲ್ಲಿ ದೈವನರ್ತಕರಾಗಿ ಸೇವೆ ಮಾಡುತ್ತಿದ್ದರು. ಅವರು 45 ವರ್ಷಗಳಿಂದ ದೈವ ನರ್ತಕರಾಗಿ ಕೂಡುಕಟ್ಟಿಗೆ ಸಂಬಂಧಿಸಿದಂತೆ ದೈವಾರಾಧಕರಾಗಿ ಗ್ರಾಮದೈವಗಳ ಪರಿಚಾರಕಾಗಿ ಸೇವೆ ಸಲ್ಲಿಸುತ್ತಿದ್ದರು.
ಏನಾಗಿತ್ತು?
ಇಡ್ಯಡ್ಕದಲ್ಲಿ ದೈವಗಳ ಕೋಲ ಸೇವೆ ನಡೆಯುತ್ತಿದ್ದಾಗ ಕಾಂತು ಅಜಿಲ ಶಿರಾಡಿ ದೈವದ ಕೋಲ ಕಟ್ಟಿದ್ದರು. ಎರಡು ದೈವಗಳ ನರ್ತನ ಸೇವೆ ಏಕ ಕಾಲದಲ್ಲಿ ನಡೆಯುತ್ತಿತ್ತು. ಭಕ್ತರು ಸುತ್ತಲೂ ಕುಳಿತು ನೋಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕಾಂತು ಅಜಿಲ ನರ್ತನ ಸೇವೆಯಲ್ಲಿ ತಲ್ಲೀನರಾಗಿದ್ದಾಗಲೇ ಕುಸಿದು ಬಿದ್ದಿದ್ದರು. ತಕ್ಷಣ ನೆರೆದ ಭಕ್ತರು ಧಾವಿಸಿ ಎಬ್ಬಿಸಿದರು. ಆದರೆ, ದುರಾದೃಷ್ಟವಶಾತ್ ಕೆಲವೇ ಹೊತ್ತಿನಲ್ಲಿ ಕಾಂತು ಅಜಿಲ ಮೃತಪಟ್ಟಿದ್ದರು.