ಉಡುಪಿ, ಏ 01 (DaijiworldNews/HR): ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಜೆರಾಲ್ಡ್ ಐಸಾಕ್ ಲೋಬೊರವರು ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರನ್ನು ಧರ್ಮಪ್ರಾಂತ್ಯದ ನೂತನ ಶ್ರೇಷ್ಟಗುರುಗಳಾಗಿ ನೇಮಕ ಮಾಡಿದ್ದಾರೆ.
ಎಪ್ರಿಲ್ 1ರಂದು ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಸರಳ ಧಾರ್ಮಿಕ ಕಾರ್ಯಕ್ರಮದಲ್ಲಿ ಧರ್ಮಾಧ್ಯಕ್ಷರು ಪ್ರಾರ್ಥನೆಯನ್ನು ಸಲ್ಲಿಸಿ, ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್ರವರಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಧರ್ಮಪ್ರಾಂತ್ಯದ ಕುಲಪತಿ ಅತಿ ವಂ. ಡೊ. ರೋಶನ್ ಡಿಸೋಜಾ, ಉಡುಪಿ ಶೋಕಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್, ವಂ. ಸ್ಟೀಫನ್ ಡಿಸೋಜಾ, ಉಜ್ವಾಡ್ ಪಾಕ್ಷಿಕದ ಸಂಪಾದಕರಾದ ವಂ. ರೊಯ್ಸನ್ ಫೆರ್ನಾಂಡಿಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೂತನ ಶ್ರೇಷ್ಟಗುರು ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್ರವರು ಪ್ರಸ್ತುತ ಪಾಂಗಾಳ-ಶಂಕರಪುರ ಸಂತ ಯೋಹಾನ್ನರ ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು 1955 ಸಪ್ಟಂಬರ್ 29 ರಂದು ಕುಂದಾಪುರದ ಜೋನ್ ಗೊನ್ಸಾಲ್ವಿಸ್ ಮತ್ತು ಆಂಜೆಲಿನ್ ರೆಬೆಲ್ಲೊರವರ ಪುತ್ರರಾಗಿ ಜನಿಸಿದ ಇವರು, 1985ರಲ್ಲಿ ಗುರುದೀಕ್ಷೆಯನ್ನು ಸ್ವೀಕರಿಸಿದರು. ಬಿ.ಎಸ್ಸಿ., ಬಿ.ಎಡ್, ಎಮ್.ಎ ಸ್ನಾತಕೋತ್ತರ ಪದವಿ ಮತ್ತು ದೇವಶಾಸ್ತ್ರದಲ್ಲಿ ಪದವಿಯನ್ನುಗಳಿಸಿರುವ ಇವರು, ಕುಲಶೇಕರದಲ್ಲಿ ಸಹಾಯಕ ಧರ್ಮಗುರು ಮತ್ತು ಜೆಪ್ಪು ಸಂತ ಅಂತೊನಿ ಆಶ್ರಮದಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕೊಕ್ಕಡ, ಬೈಂದೂರ್, ಉಜಿರೆ, ಕೆಮ್ಮಣ್ ಮತ್ತು ಪಾಂಗಾಳ-ಶಂಕರಪುರ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾಗಿ ಮತ್ತು ಪುತ್ತೂರ್, ಉಜಿರೆ, ಲೂರ್ಡ್ಸ್ ಸೆಂಟ್ರಲ್ ಸ್ಕೂಲ್-ಬಿಜೈ, ಮಿಲಾಗ್ರಿಸ್ ಪಿಯು ಕೋಲೆಜ್-ಕಲ್ಯಾಣ್ಪುರ್ ಮತ್ತು ಬೀದರ್ನ ಶಾಲಾ-ಕೋಲೆಜ್ಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಾತ್ಮಿಕ ನಿರ್ದೇಶಕರಾಗಿ ಮತ್ತು ಧರ್ಮಪ್ರಾಂತ್ಯದ ಶ್ರೀ-ಸಾಮಾನ್ಯ ಆಯೋಗದ ನಿರ್ದೇಶಕರಾಗಿ ಸೇವೆ ನೀಡುತ್ತಿದ್ದಾರೆ.
2012 ಜುಲಾಯ್ 16ರಂದು ಅಸ್ತಿತ್ವಕ್ಕೆ ಬಂದ ಉಡುಪಿ ಧರ್ಮಪ್ರಾಂತ್ಯವು ಇತ್ತೀಚಿಗೆ ತನ್ನ ದಶಮಾನೋತ್ಸವನ್ನು ಆಚರಿಸಿದ್ದು, ಕಳೆದ 10 ವರ್ಷಗಳಲ್ಲಿ ವಂದನೀಯ ಧರ್ಮಗುರು ಬ್ಯಾಪ್ಟಿಸ್ಟ್ ಮಿನೇಜಸ್ರವರು ಶ್ರೇಷ್ಟ ಗುರುಗಳಾಗಿ ಸೇವೆ ಸಲ್ಲಿಸಿರುತ್ತಾರೆ.