ಉಳ್ಳಾಲ, ಏ 01 (DaijiworldNews/MS): ಹರೇಕಳದಿಂದ ಅಡ್ಯಾರ್ ಕಣ್ಣೂರು ಸಂಪರ್ಕಿಸುವ 195.50 ಕೋ.ರೂ. ವೆಚ್ಚದ ಸೇತುವೆ ಮತ್ತು ಅಣೆಕಟ್ಟು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಇನ್ನೆರಡು ದಿನಗಳಲ್ಲಿ ಅವಕಾಶ ಕಲ್ಪಿಸುವ ಕುರಿತು ಸೇತುವೆ ಗುತ್ತಿಗೆ ಕಂಪೆನಿಯ ಇಂಜಿನಿಯರ್ ತಿಳಿಸಿದ್ದಾರೆ.
ಸಾರ್ವಜನಿಕರು ಶಾಸಕ ಯು.ಟಿ ಖಾದರ್ ಅವರನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಎ.1ರಿಂದ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ತಿಳಿಸಿದ್ದರು.
ಆದರೆ ಸೇತುವೆ ಮೇಲೆ ನಡೆಸಲಾದ ಕಾಂಕ್ರೀಟಿಕರಣ ಕ್ಯೂರಿಂಗ್ ಗೆ ಇನ್ನೆರಡು ದಿನಗಳು ಬೇಕಾಗಿದೆ ಅಲ್ಲದೆ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯಿಂದ ಯಾವುದೇ ಆದೇಶ ಬಾರದ ಹಿನ್ನೆಲೆಯಲ್ಲಿ ಇಂದು ಸಂಚಾರಕ್ಕೆ ಮುಕ್ತಿಗೊಳಿಸಲಾಗಿಲ್ಲ. ಎರಡು ದಿನಗಳ ಬಳಿಕ ಇಲಾಖೆ ಆದೇಶ ನೀಡಿದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು ಅನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಎಪ್ರಿಲ್ ಫೂಲ್ ಎಂದ ಸ್ಥಳೀಯರು!
ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ಸುದ್ಧಿ ಗಮನಿಸಿ ಹಲವರು ವಾಹನಗಳನ್ನು ಹರೇಕಳವರೆಗೂ ತಂದು ಬಳಿಕ ತೆರಳಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ವಾಪಸ್ಸಾದರು. ಎಪ್ರಿಲ್ ಮೊದಲ ಮೂರು ದಿನಗಳು ಮೂರ್ಖರ ದಿನ ಎಂದು ಹೇಳುವಂತೆ, ಇಂದು ಸೇತುವೆ ಓಪನ್ ಎಂದು ಎಪ್ರಿಲ್ ಫೂಲ್ ಮಾಡಿದರೆಂಬ ವ್ಯಂಗ್ಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.