ಉಳ್ಳಾಲ, ಏ 01 (DaijiworldNews/MS): ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್-ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಎ.1ರಿಂದ ದ್ವಿಚಕ್ರ ಮತ್ತು ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಚಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸೇತುವೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸುವಂತಿಲ್ಲ. ಆದರೆ ಗ್ರಾಮಸ್ಥರು ಸೇತುವೆಯ ಬಳಕೆಗೆ ಅವಕಾಶ ಮಾಡಿಕೊಡುವಂತೆ ಸ್ಥಳೀಯ ಶಾಸಕ ಯು.ಟಿ. ಖಾದರ್ ಬಳಿ ಮನವಿ ಮಾಡಿಕೊಂಡ ಮೇರೆಗೆ ಅವರು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
'ಹರೇಕಳ-ಅಡ್ಯಾರ್ ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ.ಚುನಾವಣಾ ನೀತಿ ಸಂಹಿತೆಯಿರುವ ಕಾರಣ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ನಡೆಸುವಂತಿಲ್ಲ. ಹಾಗಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ಗೆ ಸೂಚನೆ ನೀಡಿದ್ದೇನೆ. ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಹಾಗಾಗಿ ಅತ್ಯಂತ ಎಚ್ಚರಿಕೆ ವಹಿಸಿ ವಾಹನ ಚಲಾಯಿಸಬಹುದಾಗಿದೆ. ಚುನಾವಣೆ ಮುಗಿದ ಬಳಿಕ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗುವುದು' ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
195.50 ಕೋ.ರೂ. ವೆಚ್ಚದ ಈ ಸೇತುವೆ ಮತ್ತು ಅಣೆಕಟ್ಟು ಕಾಮಗಾರಿ ಬಹುತೇಕ ಮುಗಿದಿದೆ. ಪಶ್ಚಿಮ ವಾಹಿನಿ ಯೋಜನೆಯಲ್ಲಿ ನೀರಾವರಿ ಇಲಾಖೆಯಡಿ ಅತಿದೊಡ್ಡ ಯೋಜನೆಯ ಕಾಮಗಾರಿ ಎನ್ನುವ ಖ್ಯಾತಿಯೂ ಇದಕ್ಕಿದೆ. ಸೇತುವೆಯು 520 ಮೀ. ಉದ್ದವಿದ್ದು, 10.6 ಮೀ. ಎತ್ತರ, 10 ಮೀ. ಅಗಲ ಹಾಗೂ ಇಕ್ಕೆಲಗಳಲ್ಲಿ ಕಾಲುದಾರಿಯೂ ಇದೆ.
ಅಣೆಕಟ್ಟಿನಿಂದ ಸಂಗ್ರಹವಾಗುವ ಸಿಹಿನೀರನ್ನು ಉಳ್ಳಾಲ ಪ್ರದೇಶದ ಮನೆ, ವ್ಯವಹಾರ ಕೇಂದ್ರಗಳಿಗೆ ಮೀಟರ್ ಅಳವಡಿಸಿ 24 ಗಂಟೆಯೂ ನೀರಿನ ವ್ಯವಸ್ಥೆ ಮಾಡುವ ಯೋಜನೆಯೂ ಇದೆ. ಈ ಸೇತುವೆಯು ಹರೇಕಳ ಗ್ರಾಮವಲ್ಲದೆ ಪಾವೂರು, ಕೊಣಾಜೆ, ಪಜೀರ್ ಗ್ರಾಮಸ್ಥರ ಪಾಲಿಗೆ ಮಂಗಳೂರು ಪ್ರಯಾಣ ಅತ್ಯಂತ ಹತ್ತಿರವಾಗಲಿದೆ. ದೇರಳಕಟ್ಟೆ-ಮಂಗಳೂರು ನಡುವಿನ ವಾಹನ ದಟ್ಟಣೆ ಸಮಸ್ಯೆ ನೀಗಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತನ್ನ ಬಜೆಟ್ನಲ್ಲಿ ಹರೇಕಳಕ್ಕೆ ಸೇತುವೆಯ ಯೋಜನೆ ಘೋಷಿಸಿ 174 ಕೋ.ರೂ. ಅನುದಾನ ಮೀಸಲಿಟ್ಟಿದ್ದರು. ಉಡುಪಿಯ ಜಿ.ಶಂಕರ್ ಟ್ರಸ್ಟ್ 195.50 ಕೋ.ರೂ.ಗೆ ಗುತ್ತಿಗೆ ವಹಿಸಿ 2020ರ ಜನವರಿಯಲ್ಲೇ ಕಾಮಗಾರಿ ಆರಂಭಿಸಿತ್ತು. ಶಾಸಕ ಯು.ಟಿ.ಖಾದರ್ 2020ರ ಮಾ.21ರಂದು ಶಿಲಾನ್ಯಾಸಗೈದಿದ್ದರು. ಮೂರು ವರ್ಷವಾಗುತ್ತಲೇ ಈ ಸೇತುವೆಯು ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿವೆ.