ಉಡುಪಿ, ಮಾ 31 (DaijiworldNews/SM): ಕರ್ನಾಟಕ ವಿಧಾನಸಬಾ ಚುನಾವಣೆ ಈಗಾಗಲೇ ಘೋಷಣೆ ಆಗಿದ್ದು ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಇಂದು ಶುಕ್ರವಾರ ಮಾರ್ಚ್ 31 ರಂದು ಎಲ್ಲಾ ಜಿಲ್ಲೆಗಳ ಸಂಭಾವ್ಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹ ಮಾಡುವ ನಿಟ್ಟಿನಲ್ಲಿ ವಿನೂತನ ಪ್ರಯೋಗ ಒಂದಕ್ಕೆ ಅಡಿ ಇಟ್ಟಿದೆ.
ಶುಕ್ರವಾರ ದಂದು ರಾಜ್ಯಾದ್ಯಾಂತ ಸಂಭಾವ್ಯ ಅಭ್ಯರ್ಥೀಗಳ ಕುರಿತಾಗಿ ಅಭಿಪ್ರಾಯ ಸಂಗ್ರಹಕ್ಕೆ ಚುನಾವಣೆಯನ್ನು ನಡೆಸಲಾಗಿದೆ. ಶಕ್ತಿ ಕೇಂದ್ರ ಮತ್ತು ಅದರ ಮೇಲ್ಮಟ್ಟ ಪದಾಧಿಕಾರಿಗಳು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಪಕ್ಷದ ಅಭ್ಯರ್ಥಿ ಯಾಗಬೇಕು ಎಂದು ಮತ ಚಲಾಯಿಸಿ ತಮ್ಮ ಅಭಿಪ್ರಾಯ ವನ್ನು ದಾಖಲಿಕರಿಸಿದ್ದಾರೆ.
ಈ ಅಭಿಪ್ರಾಯಗಳನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಚರ್ಚಿಸಿ ಪಾರ್ಲಿಮೆಂಟ್ ಬೋರ್ಡ್ ಅಂತಿಮ ಪಟ್ಟಿ ಮಾಡಲಿದೆ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಂತ್ರಿಗಳಾದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನು ಉಡುಪಿಯಲ್ಲಿ ಕೂಡಾ ಅಭಿಪ್ರಾಯ ಸಂಗ್ರಹ ನಡೆದಿದ್ದು, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಶಾಸಕರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯ ಕಾಪು, ಬೈಂದೂರು, ಕಾರ್ಕಳ ವಿಧಾನ ಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿ ಘೊಷಣೆ ಮಾಡಿದ್ದು, ಇದು ಕೂಡಾ ಬಿಜೆಪಿಗೆ ಮುಂದಿನ ಹೆಜ್ಜೆ ಇಡಲು ಸಹಾಯಕವಾಗಿದೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮತದಾನದ ಪ್ರಕ್ರಿಯೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರು “ಇದೊಂದು ಸಂಫುರ್ಣವಾಗಿ ಹೊಸತನದ ಪ್ರಯೋಗವಾಗಿದೆ. ಇದರ ಮೂಲಕ ನಿಜವಾದ ಪ್ರಜಾಪ್ರಭುತ್ವದ ಪಾಲನೆಯನ್ನು ಬಿಜೆಪಿ ಪಕ್ಷ ಮಾಡುತ್ತಿದೆ ಎಂಬುವುದನ್ನು ತೋರಿಸಿಕೊಟ್ಟಿದೆ” ಎಂದರು.
ಈ ಮತಪೆಟ್ಟಿಗೆ ಗಳನ್ನು ರಾಜ್ಯಾಧ್ಯಕ್ಷರು ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮಾತ್ರ ತೆರೆಯಬಹುದಾಗಿದ್ದು ತದ ನಂತರ ಇದರಲ್ಲಿರುವ ಅಭಿಪ್ರಾಯದ ಆಧಾರದ ಮೇಲೆ ಟಿಕೆಟ್ ಘೋಷಣೆ ಮಾಡಲಾಗುವುದು. ಉಡುಪಿ ಜಿಲ್ಲೆಯ ಐದು ವಿಧಾನಸಬಾ ಕ್ಷೇತ್ರಗಳಿಂದ ಒಟ್ಟು ಸುಮಾರು 700 ಮಂದಿ ಇಂದು ಮತವನ್ನು ಚಲಾಯಿಸಿದ್ದು, ತಮ್ಮ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕು ಎಂದು ಅಭಿಪ್ರಾಯಗಳನ್ನು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ.