ಮಂಗಳೂರು, ಮಾ 30 (DaijiworldNews/SM): ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಕಾರಣ ಜಿಲ್ಲೆಯಲ್ಲಿ ಮುಕ್ತ, ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು, ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಪರವಾನಗಿ ಪಡೆದಿರುವ ಆಯುಧಗಳನ್ನು ಠೇವಣಿ ಮಾಡುವಂತೆ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತಗಳನ್ನು ಏ.24ರ ಸೋಮವಾರದೊಳಗೆ ನಮೂನೆ ಸಂಖ್ಯೆ 8ರ ಪರವಾನಿಗೆ ಹೊಂದಿರುವ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಧಿಕೃತ ಕೋವಿ, ಮದ್ದುಗುಂಡು ವ್ಯಾಪಾರಸ್ಥರಲ್ಲಿ ಹಾಗೂ ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಅಕ್ಷೇಪಣೆಗಳಿದಲ್ಲಿ ತಮ್ಮ ಬೆಳೆ ರಕ್ಷಣೆಗಾಗಿ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸಿದ ಒಂದು ವಾರದೊಳಗೆ ಸಂಬಂಧಪಟ್ಟ, ಪೂರಕ ದಾಖಲೆಗಳೊಂದಿಗೆ ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸುವುದು.
ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಆತ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧೀಕೃತ ಮದ್ದುಗುಂಡು, ವ್ಯಾಪಾರಸ್ಥರಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ 2023ರ ಏ.24 ರೊಳಗೆ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಅಕ್ಷೇಪಗಳಿದ್ದಲ್ಲಿ, ಹಾಗೂ ತಮ್ಮ ಸ್ವರಕ್ಷಣೆಗೆ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವಾರದೊಳಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಮಂಗಳೂರು ಪೋಲಿಸ್ ಕಮಿಷನರ್ ವ್ಯಾಪ್ತಿಯನ್ನು ಹೊರತು ಪಡಿಸಿ, ಉಳಿದ ಕಡೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಅಹವಾಲು ಸಲ್ಲಿಸಬೇಕು.
ಅಮಾನತಿನ ಅವಧಿ ಮೇ.20ರ ನಂತರ ತಕ್ಷಣ ಆಯುಧ ಠೇವಣಿ ಪಡೆದ ಅಧಿಕಾರಿಗಳು ಆಯುಧಗಳನ್ನು ಠೇವಣಿದಾರರಿಗೆ ಹಿಂತಿರುಗಿಸುವಂತೆ ಸೂಚಿಸಲಾಗಿದ್ದು, ಪರವಾನಿಗೆಗಾರರು ಆಯುಧವನ್ನು ಮರು ಪಡೆದುಕೊಳ್ಳಬಹುದಾಗಿದೆ. ಜಿಲ್ಲಾಧಿಕಾರಿಯವರಿಂದ ಮಂಜೂರಾದ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರು ಜಿಲ್ಲಾಧಿಕಾರಿಯವರ ಅಧಿಕಾರ ವ್ಯಾಪ್ತಿಯೊಳಗೆ ಆಯುಧಗಳನ್ನು ಠೇವಣಿ ಇರಿಸಬೇಕು.
ಜಿಲ್ಲೆಯ ಎಲ್ಲಾ ಅಧೀಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರು ಹಾಗೂ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ನಿಯಮ 2016 ನಿಯಮ-48 ರಲ್ಲಿ ತಿಳಿಸಿರುವಂತೆ ಪ್ರತೀ ಆಯುಧಗಳಿಗೆ ತಿಂಗಳಿಗೆ 200 ರೂ.ಗಳಂತೆ ಹಾಗೂ ಮದ್ದುಗುಂಡುಗಳಿಗೆ 100 ರೂ. ಗಳಂತೆ ಆಯುಧ ಪರವಾನಿಗೆದಾರರಿಂದ ಪಡೆದು ಸರ್ಕಾರಕ್ಕೆ ಜಮೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ರವಿಕುಮಾರ್ ಎಂ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.