ಉಡುಪಿ, ಮಾ 30(DaijiworldNews/MS): "ಪೂರ್ವ ಸಮೀಕ್ಷೆಗಳು ಕೇವಲ ಒಂದು ಸಮೀಕ್ಷೆ ಮಾತ್ರ. ಸಮೀಕ್ಷೆಯನ್ನು ಮೀರಿ ಬಿಜೆಪಿಗೆ ಸ್ಪಷ್ಟವಾದ ಜನಾದೇಶ ಬರಲಿದೆ. ನಾವು ವಿಧಾನಸಭಾ ಚುನಾವಣೆಗೆ ಸರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನಿಶ್ಚಯವಾಗಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳು ಬಿಜೆಪಿ ಪರ ನಿಲ್ಲಲಿದೆ" ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದೇವರಾಜ ಅರಸು ನಂತರ ಬಿಜೆಪಿ ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿದೆ. ಎಲ್ಲಾ ಸಮುದಾಯಕ್ಕೆ ಸಿಹಿ ಹಂಚಿದ್ದು ಯಡಿಯೂರಪ್ಪ- ಬೊಮ್ಮಾಯಿ ಸರ್ಕಾರ. ಶೇಕಡ 17 ಮೀಸಲಾತಿಯನ್ನು ನೀಡಿ ಹಿಂದುಳಿದ ವರ್ಗಕ್ಕೆ ಶಕ್ತಿ ನೀಡಿದ್ದೇವೆ. ಯಡಿಯೂರಪ್ಪ ಬೊಮ್ಮಾಯಿ ಅಧಿಕಾರಾವಧಿಯಲ್ಲಿ 20 ನಿಗಮ ಮಾಡಿದ್ದೇವೆ. ಧರ್ಮದ ಆಧಾರದಲ್ಲಿ ಮೀಸಲಾತಿ ಸ್ಪಷ್ಟವಾಗಿ ಇರಲಿಲ್ಲ. ಅಲ್ಪಸಂಖ್ಯಾತರ ಮೀಸಲಾತಿಯನ್ನು ತೆಗೆದಿಲ್ಲ . ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ ಹೆಚ್ಚು ನ್ಯಾಯ ಸಿಗಲಿದೆ.
ಬಂಟ ಸಮುದಾಯದ ನಿಗಮದ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು "ಬಂಟರು ಬಿಜೆಪಿ ಮತ್ತು ರಾಷ್ಟ್ರೀಯತೆಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅವರ ಭಾವನೆ ಗೌರವಿಸೋದು ನಮ್ಮ ಧರ್ಮ ಬೇಡಿಕೆಯನ್ನು ಪರಿಶೀಲನೆ ಮಾಡುತ್ತೇವೆ" ಎಂದರು.
ಬಿಜೆಪಿಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾತನಾಡಿದ ಕೋಟ "ಪ್ರಸ್ತುತ ಶಾಸಕರನ್ನು ಮತ್ತು ಆಕಾಂಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ. ಕೇಂದ್ರದ ನಾಯಕರಿಂದ ಕೆಲವಾರು ಸಮೀಕ್ಷೆಗಳು ನಡೆದಿದೆ. ಕಾರ್ಯಕರ್ತರ ಅಭಿಪ್ರಾಯವನ್ನು ಕೂಡಾ ಗಣನೆಗೆ ತೆಗೆದುಕೊಳ್ಳುತ್ತೇವೆ. ನಾಳೆ ಮತ್ತು ನಾಡಿದ್ದು ಪ್ರತಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ನಡೆಯಲಿದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಪಕ್ಷ ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ 150 ಕ್ಷೇತ್ರ ಗೆಲ್ಲುವುದರ ಜೊತೆ ಸ್ಪಷ್ಟ ಬಹುಮತ ಪಡೆಯುತ್ತೇವೆ. ಪ್ರತಿ ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗುತ್ತಿದೆ. ಪಕ್ಷ ಎಲ್ಲರ ಅಭಿಪ್ರಾಯವನ್ನು ಸಂಗ್ರಹ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ" ಎಂದರು.