ಕುಂದಾಪುರ, ಮಾ 22(MSP): ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾಗ ನಡೆದ ದಾಳಿಯಲ್ಲಿ ಸೆರೆಸಿಕ್ಕ ಆರೋಪಿಯೊಬ್ಬ ಪೊಲೀಸ್ ಠಾಣೆಯಿಂದ ಪೊಲೀಸರ ಮುಂದಿನಿಂದಲೇ ಎಸ್ಕೇಪ್ ಆದ ಘಟನೆ ಕೋಟ ಪೊಲೀಸ್ ಠಾಣೆಯಲ್ಲಿ ಮಾ.22 ಬುಧವಾರ ಮಧ್ಯಾಹ್ನ ನಡೆದಿದೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಸದ್ಯ ಹಂಗಾರಕಟ್ಟೆಯ ಕೆಮಿಕಲ್ ಫ್ಯಾಕ್ಟರಿ ಬಳಿಯ ನಿವಾಸಿ, ಟೆಂಪೊ ಚಾಲಕ ಮಂಜು ಎಂದು ಗುರುತಿಸಲಾಗಿದೆ. ಠಾಣೆಯಿಂದ ಆರೋಪಿ ತಪ್ಪಿಸಿಕೊಂಡಿದ್ದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಪೊಲೀಸರು ಐರೋಡಿ ಪಿಡಿಒ ಸುಭಾಸ್ ಖಾರ್ವಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಜೊತೆ ಬುಧವಾರ ಮುಂಜಾನೆ 5.30ರ ಸುಮಾರಿಗೆ ಹಂಗಾರಕಟ್ಟೆ ಸೀತಾನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಅಡ್ಡೆಗೆ 407 ಟೆಂಪೋ ವಾಹನಕ್ಕೆ ಮರಳು ತುಂಬಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ್ದರು. ಸ್ಥಳದಲ್ಲಿದ್ದ ಪೊಲೀಸರನ್ನು ನೋಡಿದ ಆರೋಪಿಗಳಾದ ಅಶೋಕ ಪೂಜಾರಿ ಹಾಗೂ ಸಂತೋಷ ತಪ್ಪಿಸಿಕೊಂಡಿದ್ದರು. ಅಶೋಕ್ ಪೂಜಾರಿಗೆ ಸೇರಿದ್ದ 5000 ರೂ. ವೌಲ್ಯದ ಒಂದು 1 ಟನ್ ಮರಳು ಸಹಿತ 407 ಟೆಂಪೋ ಹಾಗೂ ಚಾಲಕ ಮಂಜು ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆ ತಂದಿದ್ದರು.
ಮಾ.20ರಂದು ಅಪರಾಹ್ನ 3.30ರ ಸುಮಾರಿಗೆ ಠಾಣೆಯಲ್ಲಿ ವಿಧಿಬದ್ಧ ಕಸ್ಟಡಿಯಲ್ಲಿದ್ದ ಆರೋಪಿ ಮಂಜು ಪೊಲೀಸರನ್ನು ತಳ್ಳಿಹಾಕಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಸಂದರ್ಭ ಎಸೈ ರಫೀಕ್ ಎಂ ಹೊರ ಹೋಗಿದ್ದು ಹೆಡ್ಕಾನ್ಸ್ಟೇಬಲ್ ರಾಮ ದೇವಾಡಿಗ ಇದ್ದರು. ಈ ಬಗ್ಗೆ ರಾಮ ದೇವಾಡಿಗ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕರಾವಳಿಯಲ್ಲಿ ಎಲ್ಲಾ ಕಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕೆಲವು ಕಡೆ ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಇದೀಗ ಬಂಧಿಸಿ ಕರೆ ತಂದಿದ್ದ ಆರೋಪಿ ಪೊಲೀಸರನ್ನೇ ದೂಡಿ ಪರಾರಿಯಾಗುತ್ತಿರುವುದು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ. ಅಲ್ಲದೇ ಆರೋಪಿ ನಿಜವಾಗಿಯೂ ತಪ್ಪಿಸಿಕೊಂಡನೇ ಅಥವಾ ತಪ್ಪಿಸಿಕೊಳ್ಳಲು ಪೊಲೀಸರು ಸಹಕರಿಸಿದ್ದಾರೆಯೇ ಎನ್ನುವ ಅನುಮಾನಗಳು ಸ್ಥಳೀಯರನ್ನು ಕಾಡಿದೆ.
ಇತ್ತೀಚೆಗೆ ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಎಸ್ಪಿಗೆ ದೂರು ನೀಡಲಾಗಿತ್ತು. ಹೆಚ್ಚುವರಿ ಎಸ್ಪಿ ಮತ್ತು ತಂಡ ದಾಳಿ ನಡೆಸಿ ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಬಂಧಿಸಿದ್ದರು. ಈ ಸಂದರ್ಭ ಕಂಡ್ಲೂರು ಎಸೈಗೆ ಸಾರ್ವಜನಿಕರ ಮುಂದೆಯೇ ಎಸ್ಪಿ ಕ್ಲಾಸ್ ತೆಗೆದುಕೊಂಡಿದ್ದು, ಎಚ್ಚರಿಕೆ ನೀಡಿದ್ದರು. ಇದೀಗ ಕೋಟದಲ್ಲಿ ಬಂಧಿತ ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗುವ ಮೂಲಕ ಅನುಮಾನಗಳಿಗೆ ಕಾರಣವಾಗಿದೆ.