ಉಳ್ಳಾಲ, ಮಾ 29 (DaijiworldNews/SM): ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲದಲ್ಲಿ ಬೈಕಲ್ಲಿ ತೆರಳುತ್ತಿದ್ದ ಜೋಡಿಯನ್ನ ಅಡ್ಡ ಕಟ್ಟಿ ಐ-ಪೋನ್ ಮತ್ತು ಬೈಕನ್ನ ದೋಚಿದ್ದ ಮೂವರು ಖದೀಮರನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲದ ಜಿಯೋ ಪೆಟ್ರೋಲ್ ಪಂಪ್ ಬಳಿ ಕಳೆದ ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯುವಕ ಮತ್ತು ಯುವತಿ ಬೈಕಲ್ಲಿ ಜತೆಯಾಗಿ ತೆರಳುತ್ತಿದ್ದ ವೇಳೆ ಎರಡು ಸ್ಕೂಟರಲ್ಲಿ ಬಂದ ಮೂವರು ಖದೀಮರು ಅಡ್ಡ ಕಟ್ಟಿ ಯುವತಿಯ ಕೈಯಲ್ಲಿದ್ದ ಬೆಲೆ ಬಾಳುವ ಐ-ಫೋನ್ ಸುಲಿಗೆ ಮಾಡಿದ್ದಲ್ಲದೆ,ಮೋಟಾರು ಬೈಕನ್ನೂ ದೋಚಿ ಪರಾರಿಯಾಗಿದ್ದರು.ಈ ಬಗ್ಗೆ ನೊಂದ ಬೈಕ್ ಸವಾರ ಅಬ್ದುಲ್ಲ ಎಂಬವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಉಳ್ಳಾಲ ಬಸ್ತಿಪಡ್ಪು ನಿವಾಸಿ ಝಾಕೀರ್ ಹುಸೇನ್ ಅಲಿಯಾಸ್ ಶಾಕೀರ್-ಜಾಹೀರ್(27),ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಮಹಮ್ಮದ್ ಉಬೈದುಲ್ಲಾ ಅಲಿಯಾಸ್ ಉಬ್ಬಿ(33),ಉಳ್ಳಾಲ ,ಮೇಲಂಗಡಿ ನಿವಾಸಿ ಇಬ್ರಾಹಿಮ್ ಖಲೀಲ್ ಅಲಿಯಾಸ್ ಖಲೀಲ್(22) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಸ್ಕೂಟರ್ ಗಳು, ಸುಲಿಗೆ ನಡೆಸಿದ್ದ ಐಫೋನ್,ಮತ್ತು ಯಮಹಾ ಮೋಟಾರು ಬೈಕನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಆರೋಪಿಗಳನ್ನು ನಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್ ಮಾರ್ಗದರ್ಶನದ ಮೇರೆಗೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ಮತ್ತು ಉಪನಿರೀಕ್ಷಕರುಗಳಾದ ಶ್ರೀ ಕೃಷ್ಣ ಕೆ.ಹೆಚ್ ,ಸಂತೋಷ್ ಮತ್ತು ಪಿಸಿಗಳಾದ ಪ್ರವೀಣ ಶೆಟ್ಟಿ, ಅಶೋಕ್,ವಾಸುದೇವ ಸಿಬ್ಬಂದಿಗಳ ತಂಡ ಪ್ರಕರಣವನ್ನು ಶೀಘ್ರದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.