ಉಡುಪಿ, ಮಾ 29 (DaijiworldNews/DB): ಬಹುನಿರೀಕ್ಷಿತ ಸಂತೆಕಟ್ಟೆ ಓವರ್ ಪಾಸ್ ಕಾಮಗಾರಿಗೆ ಇದೀಗ ಬಂಡೆ ದೋಷ ತಗುಲಿದ್ದು, ಕಾಮಗಾರಿಗೆ ಹಿನ್ನಡೆ ಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆದಾಗಿನಿಂದ ಸಮಸ್ಯೆಗೆ ಕಾರಣವಾಗಿದ್ದ ಸಂತೆಕಟ್ಟೆ ಜಂಕ್ಷನ್ ನ ಸಮಸ್ಯೆಗೆ ಮತ್ತು ಪಾದಾಚಾರಿಗಳ ಸುಗಮ ಸಂಚಾರಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಜಂಕ್ಷನ್ ನಲ್ಲಿ ಸುಮಾರು 27.4 ಕೋಟಿ ರೂಪಾಯಿ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣ ಮಾಡಲು ಕೇಂದ್ರ ಹೆದ್ದಾರಿ ಪ್ರಾಧಿಕಾರವು ಅನುಮೋದನೆ ನೀಡಿತ್ತು. ಈ ಕಾಮಗಾರಿಗೆ ಜನವರಿ 12ರಂದು ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಂಜೆ, ಶಾಸಕ ರಘುಪತಿ ಭಟ್ ಮತ್ತು ಇತರರು ಗುದ್ದಲಿ ಫೂಜೆಯನ್ನು ಕೂಡಾ ನಡೆಸಿದ್ದರು. ಆದರೆ ಗುದ್ದಲಿ ಪೂಜೆ ನಡೆಸಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿಯೇ ಇದೀಗ ಸಂತೆಕಟ್ಟೆ ಜಂಕ್ಷನ್ ಭಾಗದಲ್ಲಿ ಬೃಹದಾಕಾರದ ಬಂಡೆ ಕಲ್ಲು ಕಂಡು ಬಂದಿದ್ದು, ಕಾಮಗಾರಿಯನ್ನು ನಡೆಸಲು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಗುದ್ದಲಿ ಪೂಜೆಯ ಸಂಧರ್ಭದಲ್ಲಿ ವೇದಿಕೆಯಲ್ಲಿ ಮಾತನಾಡಿ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದ ಉಡುಪಿ ಶಾಸಕ ರಘುಪತಿ ಭಟ್ ಅವರು ಸೂಕ್ತ ಪರ್ಯಾಯ ರಸ್ತೆ, ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಣ್ಣು ತೆಗೆಯಲು ಪ್ರಾರಂಭ ಮಾಡಬೇಕು. ಅಲ್ಲದೇ ಮೂರು ಪಾಳಿಯಲ್ಲಿ ಕೆಲಸ ಮಾಡಿ ಮಳೆಗಾಲದ ಮುನ್ನ ಒಂದು ಭಾಗದ ಕಾಮಗಾರಿಯನ್ನು ಸಂಫೂರ್ಣಗೊಳಿಸಿಬೇಕು ಎಂದು ಸೂಚನೆ ನೀಡಿದ್ದರು. ಆದರೆ ಪ್ರಸ್ತುತ ಕಾಮಗಾರಿ ಸಾಗುತ್ತಿರುವ ವೇಗವನ್ನು ಗಮನಿಸಿದರೆ ಈ ಬಾರಿಯ ಮಳೆಗಾಲದ ಒಳಗೆ ಈಗ ಗುಂಡಿ ತೋಡಿರುವ ಸ್ಥಳದ ಕಾಮಗಾರಿ ಪೂರ್ಣಗೊಳಿಸುವುದು ಕಷ್ಟ ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.
ಪ್ರಸ್ತುತ ಈ ಓವರ್ ಪಾಸ್ ಕಾಮಗಾರಿಯ ಪ್ರಮುಖ ಭಾಗವಾದ ಸಂತೆಕಟ್ಟೆ ಜಂಕ್ಷನ್ ಭಾಗದಲ್ಲಿ ಪತ್ತೆಯಾಗಿರುವ ಬೃಹತ್ ಬಂಡೆ ಕಲ್ಲನ್ನು ಸ್ಪೋಟಕ ಬಳಸಿ ಒಡೆಯಲು ಅಥವಾ ವಿಲೇವಾರಿ ಮಾಡಲು ಕೂಡಾ 8 ಇಲಾಖೆಗಳ ಅನುಮತಿ ಪತ್ರ ಬೇಕಾಗಿದೆ. ಮಾತ್ರವಲ್ಲದೇ ಜನವಸತಿ ಮತ್ತು ಸಂಚಾರ ದಟ್ಟಣೆ ಇರುವ ಪ್ರದೇಶದಲ್ಲಿ ಸ್ಫೋಟಕ ಬಳಸಿ ಬಂಡೆ ಒಡೆಯುವುದು ಸುಲಭದ ಮಾತಲ್ಲ, ಹೀಗಾಗಿ ಈ ಸಮಸ್ಯೆ ಪರಿಹಾರವಾಗುವ ತನಕ ಮುಂದಿನ ಕಾಮಗಾರಿ ಆಮೆ ಗತಿಯಲ್ಲಿಯೇ ಸಾಗಲಿದ್ದು, ಮಳೆಗಾಲದ ಮುನ್ನ ಕಾಮಗಾರಿ ಮುಗಿಯುವುದು ಅಸಾಧ್ಯದ ಮಾತು. ಪ್ರಸ್ತುತ ಬಂಡೆಕಲ್ಲು ಪತ್ತೆಯಾದ ಭಾಗದ ಸಮಾನಾಂತರವಾಗಿ ಹಳೆ ಸಂತೆ ಮಾರ್ಕೆಟ್ ಇದ್ದು ಇದರ ಒಳಗಡೆ ಬಂಡೆ ಕಲ್ಲು ಮೇಲ್ಮಟ್ಟದಲ್ಲಿಯೇ ಇದೆ,. ಹೀಗಾಗಿ ಓವರ್ ಪಾಸ್ ನಿರ್ಮಾಣ ಕಾಮಗಾರಿಗಾಗಿ ಹೊಂಡ ತೆಗೆಯುವ ಮುನ್ನ ಸೂಕ್ತ ಪರಿಶೀಲನೆ ನಡೆಸಿ ಕಾಮಗಾರಿ ಪ್ರಾರಂಭ ಮಾಡಿದ್ದಲ್ಲಿ, ಬಂಡೆ ಒಡೆಯಲು ಸೂಕ್ತ ಮುನ್ನೆಚ್ಚೆರಿಕೆ ಕೈಗೊಂಡು ಕಾಮಗಾರಿ ಪ್ರಾರಂಭಿಸಬಹುದಿತ್ತು ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.
ಮುಂದಿನ ಮಳೆಗಾದ ಒಳಗೆ ಕಾಮಗಾರಿ ಸಂಪೂರ್ಣವಾಗದೇ ಇದ್ದಲ್ಲಿ ಇಲ್ಲಿನ ಪರಿಸ್ಥಿತಿ ನಿಜಕ್ಕೂ ಹದೆಗೆಡಲಿದ್ದು, ಕಾಮಗಾರಿಯ ವೇಗವನ್ನು ಹೆಚ್ಚಿಸಿ ಸಮಾರೋಪಾದಿಯಲ್ಲಿ ಕಾಮಗಾರಿ ನಿರ್ವಹಿಸಬೇಕಾದ ಅನಿವಾರ್ಯತೆ ಗುತ್ತಿಗೆದಾರರಿಗೆ ಇದೆ. ಅಲ್ಲದೇ ಈಗ ಸಂತೆಕಟ್ಟೆ ಜಂಕ್ಷನ್ ನಲ್ಲಿಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮಾವರ ದಿಂದ ಬರುವ ಬಸ್ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದು, ಪ್ರಯಾಣಿಕರು ಸೂಕ್ತ ವ್ಯವಸ್ಥೆಗಳಿಲ್ಲದೇ ನಿಬಿಡ ವಾಹನ ಸಂಚಾರ ಇರುವ ಹೆದ್ದಾರಿಯಲ್ಲಿಯೇ ಬಸ್ ಗಾಗಿ ನಿಲ್ಲುವುದು ಕೂಡಾ ಅಪಾಯಕಾರಿಯಾಗಿ ಪರಿಣಮಿಸಿದೆ.